ಬೆಂಗಳೂರು : ಸಿ.ಪಿ.ಯೋಗೇಶ್ವರ್ ಪರ ಸಚಿವ ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದು, ದೆಹಲಿ ಭೇಟಿ ವೇಳೆ ಯೋಗೇಶ್ವರ್ಗೆ ಸಚಿವ ಸ್ಥಾನ ಕೊಡುವಂತೆ ವರಿಷ್ಠರಲ್ಲಿ ಮಾತಾಡಿರುವುದಾಗಿ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ಸರ್ಕಾರ ರಚನೆಗೆ ಸಹಕಾರ ಕೊಟ್ಟಿದ್ದಾರೆ. ಯೋಗೇಶ್ವರ್ ಪರ ಮಾತಾಡೋದು ನನ್ನ ಧರ್ಮ. ಯೋಗೇಶ್ವರ್ಗೆ ಸಚಿವ ಸ್ಥಾನ ಬೇಡ ಎಂದು ರೇಣುಕಾಚಾರ್ಯ, ರಾಜುಗೌಡ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದ್ರೆ ಯೋಗೇಶ್ವರ್ ಪರ ಮಾತಾಡೋದು ನನ್ನ ಕರ್ತವ್ಯ. ಯೋಗೇಶ್ವರ್ಗೆ ಸಚಿವ ಸ್ಥಾನ ಕೊಡಿ ಅಂತ ಮಾತಾಡಿದ್ದೇನೆ. ಮಾಡೋದು ಬಿಡೋದು ವರಿಷ್ಠರಿಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.
ವಲಸಿಗರ ಸಂಪುಟ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ವರಿಷ್ಠರನ್ನು ಭೇಟಿ ಮಾಡಿದ್ದು ನಿಜ. ವರಿಷ್ಠರೆದುರು ಯಾವುದೇ ಷರತ್ತು ಹಾಕಿಲ್ಲ, ಗಡುವು ಕೊಟ್ಟಿಲ್ಲ. ಸರ್ಕಾರ ರಚನೆಗೆ ನೆರವಾದವರಿಗೆ ಅನ್ಯಾಯ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದೇನೆ. ಸರ್ಕಾರ ರಚನೆಗೆ ನೆರವಾದವರಿಗೆ ಸಚಿವ ಸ್ಥಾನ ಕೊಡುವಂತೆ ಮಾತಾಡಿದ್ದೇನೆ. ಶೀಘ್ರದಲ್ಲಿ ಎಲ್ಲರಿಗೂ ಸಿಹಿ ಸುದ್ದಿ ಬರಲಿದೆ. ಸಿಹಿ ಸುದ್ದಿ ಬರುವ ಆಶಾ ಭಾವನೆ ನನಗಿದೆ ಎಂದು ತಿಳಿಸಿದರು.
ದೆಹಲಿ ವರಿಷ್ಠರ ಜೊತೆ ಸರ್ಕಾರಕ್ಕೆ ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿದ್ದೇನೆ. ಸಂಪುಟ ವಿಸ್ತರಣೆ ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ಸಿಎಂ ಸಹ ದೆಹಲಿಗೆ ಹೋಗಿ ಮಾತುಕತೆ ನಡೆಸಿ ಬಂದಿದ್ದಾರೆ. ತ್ಯಾಗ ಮಾಡಿದ ಎಲ್ಲರಿಗೂ ಸಚಿವ ಸ್ಥಾನ ಸಿಗುವ ಆಶಾ ಭಾವನೆ ಇದೆ. ದೆಹಲಿಯಲ್ಲಿ ಸಿಎಂ ಭೇಟಿ ಸಾಧ್ಯವಾಗಲಿಲ್ಲ. ಮಾಧ್ಯಮಗಳು ಇದನ್ನೇ ತಪ್ಪಾಗಿ ಪ್ರಸಾರ ಮಾಡಿವೆ ಎಂದು ಇದೇ ವೇಳೆ ತಿಳಿಸಿದರು.