ಬೆಂಗಳೂರು: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಸ್ಕಿ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬರಲು ನಾವು 17 ಮಂದಿ ರಾಜೀನಾಮೆ ನೀಡಿದ್ದೆವು. ಸಿಎಂ ಎಲ್ಲರ ಬೇಡಿಕೆಯನ್ನು ಈಡೇರಿಸಿದ್ದಾರೆ. ಕಾಂಗ್ರೆಸ್ ತೊರೆದ 17 ಜನರಿಗೂ ಭರವಸೆ ನೀಡಲಾಗಿತ್ತು. ಆ ಭರವಸೆಯನ್ನು ಪಕ್ಷ ಮತ್ತು ಸಿಎಂ ಈಡೇರಿಸುತ್ತಾರೆ. ಸಹಜವಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ನಾನು ಹಣಕ್ಕಾಗಿ ಬಿಜೆಪಿಗೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ ಬಂದಿದ್ದೇನೆ. ಕಾಂಗ್ರಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸುವ ವಿಶ್ವಾಸ ಇದೆ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ನಾವೆಲ್ಲರೂ ಒಟ್ಟಾಗಿ ಇದ್ದೇವೆ. ಎಲ್ಲರೂ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬಸವರಾಜ ತುರವಿಹಾಳ್ ಕಾಂಗ್ರೆಸ್ಗೆ ಹೋದ್ರೆ ಏನೂ ಆಗುವುದಿಲ್ಲ. ಕಳೆದ ಬಾರಿ ಅವರಿಗೆ ಬಂದಿದ್ದ ಮತಗಳು ಬಿಜೆಪಿಯ ಮತಗಳಾಗಿದ್ದವು. ಹಾಗಾಗಿ ಜನರು ನನ್ನನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.