ಬೆಂಗಳೂರು: ಉತ್ತರ ಕರ್ನಾಟಕ ಭಾಗಕ್ಕೆ ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ. ಜನ ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿದ್ದು ಬದುಕು ದುಸ್ತರವಾಗಿದೆ. ಆದ್ರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಈ ಧೋರಣೆ ವಿರೋಧಿಸಿ ಅಕ್ಟೋಬರ್ 3 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ನಿರ್ಧರಿಸಿದೆ.
ನೆರೆ ಪರಿಹಾರ ವಿಚಾರದಲ್ಲಿ ಮಲತಾಯಿ ಧೋರಣೆ ಆರೋಪ; ಬೃಹತ್ ಪ್ರತಿಭಟನೆಗೆ ನಿರ್ಧಾರ
ಉತ್ತರ ಕರ್ನಾಟಕ ಭಾಗದ ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ. ಜನ ಮನೆ - ಮಠ ಕಳೆದುಕೊಂಡು ನಿರ್ಗತಿಕರಾಗಿದ್ದು ಬದುಕು ದುಸ್ತರವಾಗಿದೆ. ಹೀಗಾಗಿ ಈ ಧೋರಣೆ ವಿರೋಧಿಸಿ ಅಕ್ಟೋಬರ್ 3 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ನಿರ್ಧರಿಸಿದೆ.
ಬೆಳಗ್ಗೆ 9.30ಕ್ಕೆ ರಾಜಾಜಿನಗರದ ಬಾಷ್ಯಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅಲ್ಲಿಂದ ರಾಮಮಂದಿರ ಮಾರ್ಗವಾಗಿ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಪ್ರತಿಭಟನೆಗೆ ಚಾಲನೆ ನೀಡಲಿದ್ದಾರೆ ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮೇಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ. ನೆರವು ನೀಡುವ ಭರವಸೆಯನ್ನೂ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಆದರೆ ಕರ್ನಾಟಕವನ್ನು ಸಂಪೂರ್ಣವಾಗಿ ಮರೆತು ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.