ಬೆಂಗಳೂರು :ಕೊರೊನಾ ಲಾಕ್‌ಡೌನ್‌ನಿಂದಾಗಿ ಜನರು ಸಾಕಷ್ಟು ಪ್ರಮಾಣದಲ್ಲಿ ದೊಡ್ಡ ನಗರಗಳನ್ನು ತೊರೆದು ತಮ್ಮ ತಮ್ಮ ಊರುಗಳಿಗೆ ಸೇರುತ್ತಿರುವ ಹಿನ್ನೆಲೆ ಗೃಹಬಳಕೆ ವಸ್ತುಗಳು ವ್ಯಾಪಾರವಾಗುತ್ತಿಲ್ಲ ಎಂದು ಅಂಗಡಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಎಂದೂ ಕಾಣದ ನಷ್ಟ.. ಗೃಹ ಬಳಕೆ ವಸ್ತುಗಳ ವ್ಯಾಪಾರ ಅರ್ಧಕ್ಕೆ ಕುಸಿತ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಪ್ರತಿನಿತ್ಯ ಒಂದು ಸಣ್ಣ ಅಂಗಡಿಯಲ್ಲೂ ಕನಿಷ್ಠವೆಂದರೂ 20 ರಿಂದ 30 ಸಾವಿರ ರೂಪಾಯಿ ವ್ಯಾಪಾರ ಆಗುತ್ತದೆ. ಆದರೆ, ಈಗ ಹತ್ತು ಸಾವಿರ ರೂಪಾಯಿ ವ್ಯಾಪಾರವಾಗುವುದೂ ಕಷ್ಟವಾಗುತ್ತಿದೆ ಎಂದು ಗೃಹಬಳಕೆ ಅಂಗಡಿ ಮಾಲೀಕ ಮಂಗಳ್ ಈಟಿವಿ ಭಾರತಕ್ಕೆ ಹೇಳಿದರು.
ಅವರು ಹೇಳುವ ಪ್ರಕಾರ ಬಾಕ್ಸ್ ಸಾಮಗ್ರಿಗಳಾದ ಕುಕ್ಕರ್,ಮಿಕ್ಸಿ, ಗ್ರೈಂಡರ್ ಹಾಗೂ ಇನ್ನಿತರ ಉಪಕರಣಗಳನ್ನು ಯಾರೂ ಕೇಳುತ್ತಿಲ್ಲ. ಕೇವಲ ಚಿಲ್ಲರೆ ವಸ್ತುಗಳಾದ ತಟ್ಟೆ, ಚಮಚಗಳಂತಹ ವಸ್ತುಗಳು ಮಾರಾಟವಾಗುತ್ತಿವೆ. ಇದಿಷ್ಟೇ ಅಲ್ಲದೆ ಹೊರರಾಜ್ಯಗಳಿಂದ ಬರಬೇಕಾದ ಉಪಕರಣಗಳಿಗೆ ಅಂತಾರಾಜ್ಯ ಗಡಿ ದಾಟುವ ವಿಚಾರದಲ್ಲಿ ಪ್ರಸ್ತುತ ಸಾಕಷ್ಟು ಗೊಂದಲಗಳಿವೆ. ಕಡಿಮೆ ಪ್ರಮಾಣದಲ್ಲಿ ನಗರಗಳಿಗೆ ಉಪಕರಣಗಳು ಸೇರುತ್ತಿವೆ. ಅವುಗಳ ಬೆಲೆಯೂ ಹೆಚ್ಚಳವಾಗುತ್ತಿದೆ. ಬೆಲೆ ಏರಿಕೆಯಿಂದ ಇರುವ ಬೇಡಿಕೆಯೂ ಕುಸಿಯುತ್ತಿದೆ ಎಂದು ಸಗಟು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದರ ಜೊತೆಗೆ ಹೊಸದಾಗಿ ಪ್ರಾರಂಭಿಸಿದ ಗೃಹಬಳಕೆ ವಸ್ತುಗಳ ಅಂಗಡಿಗಳು ಲಾಕ್‌ಡೌನ್‌ನಿಂದ ಆಗಿರುವ ನಷ್ಟ ತಡೆಯಲಾರದೆ ಅಂಗಡಿಗಳನ್ನೇ ಮುಚ್ಚಿದ್ದಾರೆ. ಹೀಗಾಗಿ ನಗರದ ಹಲವೆಡೆ ಪ್ರತಿಷ್ಠಿತ ಬಡಾವಣೆಗಳಲ್ಲಿಯೂ ಅಂಗಡಿಗಳು ಬಾಡಿಗೆಗೆ ಇದೆ (to-let) ಎಂಬ ಬೋರ್ಡ್ಗಳು ಹೆಚ್ಚಾಗುತ್ತಿವೆ.
ಸರ್ಕಾರದ ಪ್ರಕಾರ ಲಾಕ್‌ಡೌನ್ ಸಡಿಲಿಕೆ ಆದನಂತರ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಆರ್ಥಿಕ ಸ್ಥಿತಿಗತಿಗಳಲ್ಲಿ ವ್ಯತ್ಯಾಸಗಳು ಕಂಡು ಬರುತ್ತವೆ ಎಂದು ಅಭಿಪ್ರಾಯಪಡಲಾಗಿತ್ತು. ಆದರೆ, ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿದ್ರೆ ಸರ್ಕಾರದ ಅಭಿಪ್ರಾಯ ಹುಸಿಯಾಗಿದೆ. ಒಟ್ಟಾರೆ ಆರ್ಥಿಕ ಸಂಕಷ್ಟದಿಂದ ಅಂಗಡಿ ಮಾಲೀಕರು ತತ್ತರಿಸಿ ಹೋಗಿರುವುದಂತೂ ನಿಜ.