ಬೆಂಗಳೂರು: ನಗರದಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಮತ್ತೆ ಆ್ಯಕ್ಟೀವ್ ಆಗಿದೆ. ಈ ಸಂಬಂಧ ಮಹದೇವಪುರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ಇಬ್ಬರು ಯುವತಿಯರು, ಐವರು ಯುವಕರಿದ್ದಾರೆ.
ಸುಂದರ ಹುಡುಗಿಯರ ಫೋಟೋ ತೋರಿಸಿ ಹನಿಟ್ರ್ಯಾಪ್: ಬೆಂಗಳೂರಲ್ಲಿ ವಂಚಕರು ಅರೆಸ್ಟ್ - Bangalore Latest News Update
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿಕೊಂಡು ಸುಂದರವಾದ ಹುಡುಗಿಯರ ಫೋಟೋ ತೋರಿಸಿ ಮರುಳು ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್‌ನ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಈ ತಂಡ ಎಲೆಕ್ಟ್ರಾನಿಕ್ ಸಿಟಿ, ಕಾಡುಗೋಡಿ, ವೈಟ್ ಫೀಲ್ಡ್‌ನ ಕೆಲ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಗಳನ್ನು ಗುರಿ ಮಾಡಿಕೊಂಡು ಸುಂದರವಾದ ಹುಡುಗಿಯರ ಫೋಟೋ ತೋರಿಸಿ ಒಂಟಿ ಮನೆಗೆ ಕರೆಸಿಕೊಳ್ತಿದ್ರಂತೆ. ತದನಂತರ ಗೌಪ್ಯ ಕ್ಯಾಮರಾದಲ್ಲಿ ಅವರ ಹಸಿಬಿಸಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು. ಹೀಗೆ ಸೆರೆ ಹಿಡಿದ ದೃಶ್ಯಗಳನ್ನು ಎರಡು ದಿನಗಳ ಬಳಿಕ ಅವರಿಗೇ ಕಳುಹಿಸಿ ಹೆಂಡತಿ, ಮಕ್ಕಳಿಗೆ ತೋರಿಸುವುದಾಗಿಯೂ, ಮಾಧ್ಯಮಗಳಲ್ಲಿ ಹಾಕಿಸುವುದಾಗಿಯೂ ಬೆದರಿಸುತ್ತಿದ್ದರಂತೆ. ಕೆಲವೊಮ್ಮೆ ಬಂಧಿತ ಆರೋಪಿಗಳ ಪೈಕಿ ಕೆಲವರು ಮಾನವ ಹಕ್ಕುಗಳ ಆಯೋಗ, ಪ್ರತಿಷ್ಠಿತ ಚಾನೆಲ್‌ನವರು ಅಂತೆಲ್ಲಾ ಹೇಳಿ ಒಂದಷ್ಟು ಜನರನ್ನು ಕರೆದುಕೊಂಡು ಬಂದು ಬೆದರಿಸಿ ಅವರ ಮೈ ಮೇಲಿದ್ದ ಒಡವೆ, ಪರ್ಸ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ನ ಹಣ ಎಲ್ಲವನ್ನೂ ದೋಚಿ ಕಳುಹಿಸುತ್ತಿದ್ದರಂತೆ.
ಸದ್ಯ ಅಪರಿಚಿತ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ವೈಟ್ ಫೀಲ್ಡ್‌ನ ಮಹದೇವಪುರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ನಂತರ ಕಾರ್ಯೋನ್ಮುಖರಾದ ಪೊಲೀಸರು, ಮಹದೇವಪುರ ಬಳಿಯ ಫೈ ಲೇಔಟ್‌ನ ಮನೆ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.