ಬೆಂಗಳೂರು: ಕೊರೊನಾ ಶಂಕಿತ ವ್ಯಕ್ತಿಯೊಬ್ಬನ ಎಡವಟ್ಟಿನಿಂದಾಗಿ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದ 20 ಸಿಬ್ಬಂದಿ ಇದೀಗ ಹೋಂ ಕ್ವಾರಂಟೈನ್ನಲ್ಲಿ ಇರುವಂತಾಗಿದೆ. ಇದರಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿಯೂ ಕ್ವಾರಂಟೈನ್ನಲ್ಲಿ ಇರಬೇಕಾಗಿದೆ.
ಹೌದು, ಕೊರೊನಾದಿಂದ ಬಲಿಯಾದ ಬೆಂಗಳೂರಿನ ಮೊದಲ ವ್ಯಕ್ತಿಯ ಜೀವನದ ಕೊನೆಯಲ್ಲಿನ ಮಹಾ ಎಡವಟ್ಟು ಇಂದು ಕೊರೊನಾ ಹೋರಾಟದಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಗೆ ಕ್ವಾರಂಟೈನ್ ಶಿಕ್ಷೆಯನ್ನು ತಂದೊಡ್ಡಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿ ಏ. 12ರಂದು ರಾಜೀವ್ ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದು, ಒಳರೋಗಿಯಾಗಿ ದಾಖಲಾಗಲು ನಿರಾಕರಿಸಿತ್ತಾರೆ. ನ್ಯುಮೋನಿಯಾ ಇರಬೇಕು, ಆದರೂ ಕೊರೊನಾ ಶಂಕೆ ಇದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗಿ ಎನ್ನುವ ವೈದ್ಯರ ಸಲಹೆ ವಿರೋಧಿಸಿ ಜಯದೇವ ಆಸ್ಪತ್ರೆಗೆ ತೆರಳುತ್ತಾರೆ. ಅಲ್ಲಿ ಹೃದಯ ಸಂಬಂಧಿ ಸಮಸ್ಯೆಯ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ನಂತರ ಅಲ್ಲಿಯೂ ದಾಖಲಾಗದೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಉತ್ತಮ ಚಿಕಿತ್ಸೆ ಸಿಗಲಿದೆ ಎಂದು ಭೇಟಿ ನೀಡಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ಕೊರೊನಾ ಶಂಕೆ ಬಂದ ಕಾರಣ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿ ರಾಜೀವ್ ಗಾಂಧಿ ಆಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಾರೆ.
ಅಂತಿಮವಾಗಿ ಬೆಳಗ್ಗೆಯಿಂದ ಆಸ್ಪತ್ರೆಗಳನ್ನು ಸುತ್ತಿ ಸಂಜೆ ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದು ಆ ವೃದ್ಧ ದಾಖಲಾಗುತ್ತಾರೆ. ಆದರೆ ವರದಿ ಬರುವ ಮೊದಲೇ ಅಂದರೆ ಆಸ್ಪತ್ರೆಗೆ ದಾಖಲಾಗಿ 24 ಗಂಟೆಯೊಳಗೆ ಮೃತಪಡುತ್ತಾರೆ. ನಂತರ ಕೋವಿಡ್-19 ಪಾಸಿಟಿವ್ ಎಂದು ವರದಿ ಬಂದಿದೆ. ಮೃತ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ 10 ವೈದ್ಯಕೀಯ ಸಿಬ್ಬಂದಿಯನ್ನು ಇದೀಗ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಯ ಇಂತಹ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಹೃದ್ರೋಗ ಆಸ್ಪತ್ರೆಯ 10 ಸಿಬ್ಬಂದಿ ಇನ್ನೂ 14 ದಿನ ಕರ್ತವ್ಯಕ್ಕೆ ಹಾಜರಾಗದೆ ಕ್ವಾರಂಟೈನ್ನಲ್ಲಿ ಇರಬೇಕಾಗಿರುವುದು ಹೊಸ ಸಮಸ್ಯೆ ತಂದೊಡ್ಡಿದೆ. ಇಷ್ಟು ಸಾಲದು ಎಂದು ಉತ್ತಮ ಚಿಕಿತ್ಸೆ ಎನ್ನುತ್ತಾ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ಹೋಗಿದ್ದ ಪರಿಣಾಮ ಅಲ್ಲಿನ 10 ವೈದ್ಯಕೀಯ ಸಿಬ್ಬಂದಿಗೂ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.
ರಾಜ್ಯದಲ್ಲಿ ಮೊದಲ ಕೊರೊನಾ ಸಾವು ಕೂಡಾ ಇದೇ ರೀತಿಯ ಆಸ್ಪತ್ರೆ ಅಲೆದಾಟದಿಂದಲೇ ಸಂಭವಿಸಿತ್ತು. ಕಲಬುರಗಿ ವ್ಯಕ್ತಿ ಉತ್ತಮ ಚಿಕಿತ್ಸೆ ಸಿಗಲಿದೆ ಎಂದು ಹೈದರಾಬಾದ್ಗೆ ಹೋಗಿ ಅಲ್ಲಿ ಚಿಕಿತ್ಸೆ ಸರಿಯಾಗದೆ ವಾಪಸ್ ಕಲಬುರಗಿ ಕಡೆ ಬರುವಾಗ ಮೃತಪಟ್ಟಿದ್ದರು. ಅವರ ಕೋವಿಡ್ -19 ವರದಿ ಪಾಸಿಟಿವ್ ಎಂದು ಬಂದಿತ್ತು. ಅಂದು ಕೂಡ ವ್ಯಕ್ತಿ ಚಿಕಿತ್ಸೆ ಪಡೆಯುವ ಮುನ್ನವೇ ರೋಗಿ ಸಂಖ್ಯೆ 6ನೇ ವ್ಯಕ್ತಿ ಮೃತಪಟ್ಟಿದ್ದರು. ಆಗಲೂ ಚಿಕಿತ್ಸೆ ನೀಡಿದ್ದ ಸ್ಥಳೀಯ ವೈದ್ಯ ಕೊರೊನಾಗೆ ಸಿಲುಕಿದ್ದರು. ಈಗಲೂ ಕೂಡಾ ಕೊರನಾ ಚಿಕಿತ್ಸೆ ನೀಡುವ ಮೊದಲೇ ರೋಗಿ ಸಂಖ್ಯೆ 252 ವ್ಯಕ್ತಿ ಮೃತಪಟ್ಟಿದ್ದು, 20 ವೈದ್ಯಕೀಯ ಸಿಬ್ಬಂದಿ ಕ್ವಾರಂಟೈನ್ನಲ್ಲಿರುವ ಸ್ಥಿತಿ ನಿರ್ಮಾಣ ಆಗಿದೆ. ಸದ್ಯ ಅವರೆಲ್ಲರಿಗೂ ಇದೀಗ ಕೋವಿಡ್-19 ಪರೀಕ್ಷೆ ಮಾಡಲಾಗುತ್ತಿದೆ.