ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಸರ್ಕಾರದ ಮೇಲೆ ಅನಾವಶ್ಯಕವಾಗಿ ಸುಳ್ಳು ಆರೋಪಗಳನ್ನು ಹೊರಿಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿರ್ಭಯಾ ಯೋಜನೆಯಡಿ ಮಹಿಳಾ ಸುರಕ್ಷತಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹಾವೇರಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎಫ್‌ಎಸ್‌ಎಲ್ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೂ ಮುನ್ನವೇ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಆರೋಪಿಸುವುದು ಸರಿಯಲ್ಲ ಎಂದು ಹೇಳಿದರು.
ಶಾಸಕ ಟಿ. ಬಿ. ಜಯಚಂದ್ರ ಅವರ ಪುತ್ರ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರುವುದರಿಂದ ಮಾಜಿ ಸಂಸದ ಮುದ್ದಹನುಮೇಗೌಡ ಅವರು ಪಕ್ಷ ಸೇರ್ಪಡೆಗೆ ವಿರೋಧಿಸುತ್ತಿರಬಹುದು. ಯಾರೇ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷದ ರಾಜ್ಯ ಚುನಾವಣಾ ಸಮಿತಿ ಒಪ್ಪಿ, ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಬೇಕು. ಬಳಿಕ ಅಂತಿಮ ನಿರ್ಧಾರವನ್ನು ನಮ್ಮ ಹೈಕಮಾಂಡ್ ಮಾಡಲಿದೆ ಎಂದು ಪರಮೇಶ್ವರ್ ತಿಳಿಸಿದರು.