ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮ ಹಾಗೂ ಗಡುವು ಮೀರಿ ಕಾರ್ಯನಿರ್ವಹಿಸುವ ಕ್ಲಬ್, ಪಬ್ ಹಾಗೂ ಇಸ್ಪೀಟ್ ಅಡ್ಡೆಗಳನ್ನು ಮುಲಾಜಿಲ್ಲದೆ ಮುಚ್ಚುವಂತೆ ಪೊಲೀಸರಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ವಿಶೇಷ ಪೊಲೀಸ್ ಆಯುಕ್ತ ಎಂ.ಎ ಸಲೀಂ ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಗರದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಬ್, ಪಬ್ ಹಾಗೂ ಇಸ್ಪೀಟ್ ಅಡ್ಡೆಗಳಿದ್ದರೆ ಅಂತಹವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಸುವಂತೆ ಸೂಚಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕ್ಯೂ ಆರ್ ಕೋಡ್ ಮೂಲಕ ಲಂಚ ಸ್ವೀಕಾರ ಸೇರಿದಂತೆ ಆರೋಪಿಗಳೊಡನೆ ಪೊಲೀಸರು ಕೈ ಜೋಡಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಯಾರನ್ನು ತಿಪ್ಪೆಸಾರಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಪಿಎಸ್‌ಐ ಅಕ್ರಮ ವಿಚಾರ: ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಪೊಲೀಸರು ಸೇರಿ 107 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಮ್ರಿತ್ ಪಾಲ್ ಮಗಳು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಐಪಿಎಸ್ ಅಧಿಕಾರಿ ಅಮ್ರಿತ್ ಪಾಲ್ ನಮಗೇನು ದಾಯಾದಿಯಲ್ಲ. ಅವರ ವಿರುದ್ಧ ಸಾಕ್ಷ್ಯಾಧಾರ ಕಂಡುಬಂದಿದ್ದರಿಂದ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಯಾರೇ ಪ್ರಭಾವಿಗಳು ಭಾಗಿಯಾಗಿರುವ ಬಗ್ಗೆ ಸಾಕ್ಷ್ಯ ಲಭಿಸಿದರೆ ಅವರನ್ನು ಬಂಧಿಸಲಾಗುವುದು. ಅಲ್ಲದೆ ಅಮ್ರಿತ್ ಪಾಲ್ ನಿರಾಪರಾಧಿ ಎಂದು ನಿರೂಪಿಸುವ ದಾಖಲಾತಿಗಳಿದ್ದರೆ ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಲಿ ಎಂದರು.