ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020ಯಲ್ಲಿ ನಡೆದ ಗ್ರಾಮೀಣ ಐಟಿ ರಸಪ್ರಶ್ನೆ ರಾಷ್ಟ್ರೀಯ ಫೈನಲ್ನಲ್ಲಿ ರಾಜಸ್ಥಾನದ ಹಿಮಾಂಶು ಮಕರ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಕರ್ನಾಟಕ ಸರ್ಕಾರದ ಐಟಿ ಬಿಟಿ ಸಚಿವಾಲಯದ ಸಹಭಾಗಿತ್ವದಲ್ಲಿ ಐಟಿ ದಿಗ್ಗಜ ಟಿಸಿಎಸ್ ಗ್ರಾಮೀಣ ಐಟಿ ರಸಪ್ರಶ್ನೆ ನಡೆಸುತ್ತದೆ. ರಾಜಸ್ಥಾನದ ಸೂರತ್‌ಗಢದ ಸ್ವಾಮಿ ವಿವೇಕಾನಂದ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿ ಹಿಮಾಂಶು ಅಂತಿಮವಾಗಿ 350 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಜೊತೆಗೆ 1 ಲಕ್ಷ ರೂ. ಬಹುಮಾನ ಗೆದ್ದುಕೊಂಡರು.
300 ಅಂಕ ಗಳಿಸಿ ಪೈಪೋಟಿ ನೀಡಿದ ಮಧ್ಯಪ್ರದೇಶದ ದೇವಾಸ್‌ನ ಎಕ್ಸಲೆನ್ಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಮನ್ ಕುಮಾರ್ ರನ್ನರ್ ಅಪ್ ಆದರು. ಇವರಿಗೆ 50 ಸಾವಿರ ರೂ. ಬಹುಮಾನ ನೀಡಲಾಯಿತು. ಈ ಅಂತಿಮ ಸುತ್ತಿನಲ್ಲಿ ಒಟ್ಟು 6 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಸುಹಾಸ್ ಶೆಣೈ ಯು., ಗುಜರಾತ್‌ನ ಭಾವನಗರದ ಪರಸ್ ಗಥಾನಿ, ಛತ್ತೀಸ್‌ಗಢದ ರಾಯ್ಪುರದ ತೋಮನ್ ಸೇನ್ ಹಾಗೂ ಮಹಾರಾಷ್ಟ್ರದ ವಾರ್ಧಾದ ಸಾಕ್ಷಿ ಹಿಂದೂಜಾ ಫೈನಲ್‌ಗೇರಿದ್ದ ಇತರ ಸ್ಪರ್ಧಿಗಳಾಗಿದ್ದರು.