ಕರ್ನಾಟಕ

karnataka

ETV Bharat / state

ಟಿಡಿಆರ್ ನೀಡದ ಬಿಡಿಎಯದ್ದು ಈಸ್ಟ್ ಇಂಡಿಯಾ ಕಂಪನಿ ಮನಸ್ಥಿತಿ ತೋರಿಸುತ್ತದೆ: ಹೈಕೋರ್ಟ್ - ಈಟಿವಿ ಭಾರತ ಕನ್ನಡ

ಭೂ ಮಾಲೀಕರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರ ನೀಡದ ಬಿಡಿಎ - ಬಿಡಿಎ ವಿರುದ್ಧ ಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್​ - ಈಸ್ಟ್ ಇಂಡಿಯಾ ಕಂಪನಿ ಮನಸ್ಥಿತಿ ಎಂದ ಹೈಕೋರ್ಟ್​

highcourt-slams-bangalore-development-authority
ಟಿಡಿಆರ್ ನೀಡದ ಬಿಡಿಎಯದ್ದು ಈಸ್ಟ್ ಇಂಡಿಯಾ ಕಂಪನಿ ಮನಸ್ಥಿತಿ ತೋರಿಸುತ್ತದೆ : ಹೈಕೋರ್ಟ್

By

Published : Mar 15, 2023, 9:11 PM IST

ಬೆಂಗಳೂರು :ಭೂ ಮಾಲೀಕರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣ ಪತ್ರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಬಿಡಿಎದ ಈ ಕ್ರಮ ಇಂದಿಗೂ ಈಸ್ಟ್ ಇಂಡಿಯಾ ಕಂಪನಿಯ ಮನಸ್ಥಿತಿ ಹೊಂದಿರುವುದನ್ನು ಪ್ರತಿಬಿಂಬಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

ಅಭಿವೃದ್ಧಿ ಕಾರ್ಯಗಳಿಗೆ ಜಮೀನು ನೀಡಿದ್ದ ಭೂ ಮಾಲೀಕರಿಗೆ ಟಿಡಿಆರ್ ನೀಡಲು ಹಿಂಜರಿದಿದ್ದ ಬಿಡಿಎ ಕ್ರಮವನ್ನು ಪ್ರಶ್ನಿಸಿ ಜಯಮ್ಮ ಮತ್ತಿತರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ, ಈ ಹಿಂದೆ ಬಿಡಿಎ ನೀಡಿದ್ದ ಭರವಸೆಯಂತೆ ಟಿಡಿಆರ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಅಲ್ಲದೆ, ಅರ್ಜಿದಾರರಿಗೆ ಟಿಡಿಆರ್ ಪ್ರಮಾಣಪತ್ರಗಳನ್ನು ವಿತರಿಸುವಂತೆ ಸೂಚನೆ ನೀಡಿದೆ.

ಜತೆಗೆ, ಮುಂದಿನ ಮೂರು ತಿಂಗಳಲ್ಲಿ ನ್ಯಾಯಪೀಠದ ಈ ಆದೇಶವನ್ನು ಪಾಲನೆ ಮಾಡಿರುವ ಸಂಬಂಧ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ವರದಿ ಸಲ್ಲಿಸಲು ಬಿಡಿಎ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ನ್ಯಾಯಾಲಯ ನಿಗದಿ ಪಡಿಸಿರುವ ದಿನಾಂಕಕ್ಕೆ ಟಿಡಿಆರ್​​ ಪ್ರಮಾಣ ಪತ್ರವನ್ನು ಅರ್ಜಿದಾರರಿಗೆ ವಿತರಣೆ ಮಾಡದಿದ್ದಲ್ಲಿ ಬಿಡಿಎ ಆಯುಕ್ತರು ವಿಳಂಬವಾದ ದಿನಗಳಿಗೆ ಪ್ರತಿ ದಿನ 1 ಸಾವಿರ ರೂ.ಗಳಂತೆ ಅರ್ಜಿದಾರರಿಗೆ ದಂಡ ಪಾವತಿಸಬೇಕಾಗುತ್ತದೆ. ಆ ದಂಡದ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಯಿಂದ ನಿಯಮದ ಪ್ರಕಾರ ವಸೂಲು ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರತಿವಾದಿ ಬಿಡಿಎ ಅರ್ಜಿದಾರರಿಗೆ ಟಿಡಿಆರ್ ಸರ್ಟಿಫಿಕೇಟ್ ನಿರಾಕರಿಸುವುದನ್ನು ಸಮರ್ಥಿಸಿಕೊಂಡಿಲ್ಲ. ಟಿಡಿಆರ್ ನಿರಾಕರಣೆ ವಾಸ್ತವವಾಗಿ ಅರ್ಜಿದಾರರಲ್ಲಿ ಹಣ ನೀಡಿ ಜಾಗದ ಹಕ್ಕು ಪತ್ರ ಪಡೆದಿದ್ದರೂ ಅವರು ಪರಿಹಾರ ಪಾವತಿಗೆ ಅರ್ಹರಲ್ಲ ಎಂದು ಹೇಳಿದಂತಾಗಿದೆ. ಒಂದು ವೇಳೆ ಸರ್ಕಾರ ನಿಯಮಗಳನ್ನು ಪಾಲಿಸದೆ ಅಭಿವೃದ್ಧಿ ಯೋಜನೆಗಳಿಗೆ ಖಾಸಗಿ ವ್ಯಕ್ತಿಯ ಜಾಗವನ್ನು ಸ್ವಾಧೀನಪಡಿಸಿಕೊಂಡರೆ ಮತ್ತು ಟಿಡಿಆರ್ ಸೌಕರ್ಯ ನಿರಾಕರಿಸಿದರೆ ಅದು ಅವೈಜ್ಞಾನಿಕವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಬಿಡಿಎ ಆದೇಶವನ್ನು ಒಮ್ಮೆ ಓದಿದರೆ ಅದು ಈಸ್ಟ್ ಇಂಡಿಯಾ ಕಂಪನಿಯ ಮನಸ್ಥಿತಿಯನ್ನು ಬಿಂಬಿಸುವಂತಿದೆ. ಈ ಬೆಳವಣಿಗೆ ಯಾವೊಬ್ಬ ಅಧಿಕಾರಿಗೆ ಹೃದಯ ಇರಬೇಕಾದ ಜಾಗದಲ್ಲಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ :ಬೆಂಗಳೂರು ದಕ್ಷಿಣ ತಾಲೂಕಿನ ಮಾರೇನಹಳ್ಳಿಯಲ್ಲಿ ರಸ್ತೆ ಅಗಲೀಕರಣಕ್ಕೆ ಬಿಡಿಎ ಅರ್ಜಿದಾರರ ಭೂಮಿಯನ್ನು ಪಡೆದಿತ್ತು. ಅದಕ್ಕೆ ಪರ್ಯಾಯವಾಗಿ ಟಿಡಿಆರ್ ಸರ್ಟಿಫಿಕೇಟ್ ನೀಡುವುದಾಗಿ ಅರ್ಜಿದಾರರಿಗೆ ಭರವಸೆ ನೀಡಿತ್ತು. ಅದರಂತೆ ಅರ್ಜಿದಾರರು ತಮ್ಮ ಜಾಗವನ್ನು ಬಿಟ್ಟು ಕೊಟ್ಟು ನಂತರ ನಿಯಮದಂತೆ ಟಿಡಿಆರ್ ಸರ್ಟಿಫಿಕೇಟ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ ಬಿಡಿಎ ಅರ್ಜಿದಾರರ ಜಾಗದ ದಾಖಲೆಗಳು ಸರಿ ಇಲ್ಲ ಎಂದು ನಿರಾಕರಿಸಿತ್ತು. ಆದರೆ ಅರ್ಜಿದಾರರು ನಿಯಮದಂತೆ ತಮ್ಮ ಬಳಿ ಜಾಗದ ಹಕ್ಕುಪತ್ರ ಇದೆ. ಆದರೂ ಬಿಡಿಎ ಟಿಡಿಆರ್ ಸರ್ಟಿಫಿಕೇಟ್ ನಿರಾಕರಿಸಿರುವುದು ಕಾನೂನು ಬಾಹಿರ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ :5, 8ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗೆ ಅವಕಾಶ ನೀಡಿದ ಹೈಕೋರ್ಟ್

ABOUT THE AUTHOR

...view details