ಕರ್ನಾಟಕ

karnataka

ETV Bharat / state

ಕೋವಿಡ್ ಚಿಕಿತ್ಸೆ: ಬೆಡ್​ಗಳ ಸಂಖ್ಯೆ ಹೆಚ್ಚಿಸಲು ಹೈಕೋರ್ಟ್ ನಿರ್ದೇಶನ - highcourt orders bbmp to increase kovid beds

ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾ ಬೆಡ್​ಗಳ ಸಂಖ್ಯೆ ಹೆಚ್ಚು ಮಾಡುವಂತೆ ಹೈಕೋರ್ಟ್​ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

highcourt
highcourt

By

Published : Apr 23, 2021, 7:27 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಉಲ್ಬಣಿಸುತ್ತಿದ್ದರೂ ಅಗತ್ಯ ಸಂಖ್ಯೆಯಲ್ಲಿ ಬೆಡ್​ಗಳು ಲಭ್ಯವಾಗದಿರುವುದಕ್ಕೆ ಆಂತಕ ವ್ಯಕ್ತಪಡಿಸಿರುವ ಹೈಕೋರ್ಟ್, ಕೂಡಲೇ ಬೆಡ್​ಗಳ ಸಂಖ್ಯೆ ಹೆಚ್ಚಿಸುವಂತೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಸಲ್ಲಿಸಿದ್ದ ಬೆಡ್ ವಿವರ ಒಳಗೊಂಡ ವರದಿ ಗಮನಿಸಿದ ಪೀಠ ಆಂತಕ ವ್ಯಕ್ತಪಡಿಸಿತು. ವರದಿ ಪ್ರಕಾರ ವೆಂಟಿಲೇಟರ್ ಸಹಿತ ಐಸಿಯು ಬೆಡ್​ಗಳ ಲಭ್ಯತೆ ಕೇವಲ 11 ಇವೆ. ಹೈ ಡಿಪೆಂಡೆನ್ಸಿ ಯೂನಿಟ್ (ಎಚ್ ಡಿಯು) ಬೆಡ್​ಗಳ ಸಂಖ್ಯೆ 42 ಇವೆ. ಬೆಂಗಳೂರಿನಲ್ಲಿ ನಿತ್ಯವೂ 15 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಬೆಡ್​​ಗಳ ಲಭ್ಯತೆ ಗಮನಿಸಿದರೆ ಆಂತಕವಾಗುತ್ತದೆ ಎಂದು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತು.

ಅಲ್ಲದೇ, ಬಿಬಿಎಂಪಿ ಹಾಗೂ ಸರ್ಕಾರ ಬೆಡ್​ಗಳ ಸಂಖ್ಯೆ ಹೆಚ್ಚಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಬೆಂಗಳೂರಿಗೆ ಹತ್ತಿರ ಇರುವ ರಾಮನಗರ ಮತ್ತಿತರೆಡೆ ಇರುವ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಬೆಡ್​ಗಳನ್ನು ಗುರುತಿಸಬೇಕು. ಐಸಿಯು, ಎಚ್​ಡಿಯು ಹಾಗೂ ಜನರಲ್ ಬೆಡ್ ನಂತಹ 3 ರೀತಿಯ ಬೆಡ್​​ಗಳ ಸಂಖ್ಯೆಯನ್ನು ಹೆಚ್ಚಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತು. ಹಾಗೆಯೇ, ಹತ್ತಿರದ ಜಿಲ್ಲಾಸ್ಪತ್ರೆಗಳ‌, ಸೇನಾ ಆಸ್ಪತ್ರೆಗಳ, ನರ್ಸಿಂಗ್ ಕಾಲೇಜುಗಳ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಆಸ್ಪತ್ರೆಗಳ ಖಾಲಿ ಬೆಡ್ ಗಳನ್ನು ಬಳಸಿಕೊಳ್ಳಲು ಮತ್ತು ಚಿಕಿತ್ಸೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ನೆರವು ಕೋರಬಹುದು ಎಂದು ಸಲಹೆ ನೀಡಿತು. ಇನ್ನು ಏಪ್ರಿಲ್ 22ರಂದು ನೀಡಿರುವ ಆದೇಶದಂತೆ ರೆಮ್ಡೆಡಿಸಿವರ್ ಲಸಿಕೆ, ಆಕ್ಸಿಜನ್ ಒದಗಿಸಲು, ಆಸ್ಪತ್ರೆಗಳ ಎದುರು ಕೋವಿಡ್ ರೋಗಿಗಳಿಗೆ ನೆರವು ನೀಡಲು ಹೆಲ್ಪ್ ಡೆಸ್ಕ್​ಗಳನ್ನು ಸ್ಥಾಪಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ವಿಚಾರಣೆ ವೇಳೆ ಈ ನಿರ್ದೇಶನಗಳ ಅನುಪಾಲನಾ ವರದಿ ಸಲ್ಲಿಸಬೇಕು. ರೆಮ್ಡೆಸಿವರ್, ಆಕ್ಸಿಜನ್ ಬೇಡಿಕೆ ಹಾಗೂ ಪೂರೈಕೆ ಬಗ್ಗೆ ಹಾಗೂ ಎಷ್ಟು ಹೆಚ್ಚುವರಿ ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 27ರ ಬೆಳಗ್ಗೆ 11ಕ್ಕೆ ಮುಂದೂಡಿತು.

ಫನಾಗೆ ಹೈಕೋರ್ಟ್ ನೋಟಿಸ್
ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ವಿಚಾರವಾಗಿ ಅವರಿಂದಲೇ ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಪೀಠ ಫನಾಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಪರಿಸ್ಥಿತಿ ಸುಧಾರಿಸಲು ನೆರವಾಗುವಂತೆ ಸೂಚನೆ ನೀಡಿತು.

ABOUT THE AUTHOR

...view details