ಬೆಂಗಳೂರು:ನಾಳೆ ನಡೆಯಲಿರುವ ಕರ್ನಾಟಕ ಬಂದ್ನಿಂದ ಆಗುವ ಆರ್ಥಿಕ ನಷ್ಟಕ್ಕೆ ಆಯೋಜಕರೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿರುವ ಹೈಕೋರ್ಟ್, ಬಂದ್ ಆಚರಿಸುವವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಹಾಗೂ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ನಾಳೆ ನಡೆಯಲಿರುವ ಪ್ರತಿಭಟನೆ ಸಂಬಂಧ ಪ್ರತಿಕ್ರಿಯಿಸಿದ ಪೀಠ, ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ಈ ಬಂದ್ನಿಂದಾಗುವ ನಷ್ಟಕ್ಕೆ ಆಯೋಜಕರೇ ಹೊಣೆಯಾಗಿರುತ್ತಾರೆ. ಬೀದಿಬದಿ ವ್ಯಾಪಾರಿಗಳಿಗೆ ಆಗುವ ನಷ್ಟಕ್ಕೂ ಆಯೋಜಕರೇ ಹೊಣೆಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ ಪೀಠ, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರ ಸಾಂಕ್ರಾಮಿಕ ರೋಗಗಳ ತಡೆ ಕಾಯ್ಗೆಗೆ ತಿದ್ದುಪಡಿ ತಂದಿದೆ. ಆ ಪ್ರಕಾರ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. ಆದರೆ ಸರ್ಕಾರ ಕಾಯ್ದೆಯ ನಿಯಮಗಳನ್ನು ಅಮಾನತಿನಲ್ಲಿಟ್ಟು, ಅದಕ್ಕೆ ತಿದ್ದುಪಡಿ ತರುತ್ತೇವೆ ಎನ್ನುತ್ತಿದೆ. ಕಡೇ ಪಕ್ಷ ಕಾಯ್ದೆಗೆ ತಿದ್ದುಪಡಿ ಮಾಡುವುದಕ್ಕೂ ಮುಂದಾಗಿಲ್ಲ. ಸರ್ಕಾರದ ಈ ಕ್ರಮ ಸರಿಯಾದ ನಡೆಯಲ್ಲ ಎಂದಿತು.
ಈ ಹಿಂದೆ ಬಂದ್, ರ್ಯಾಲಿ ವೇಳೆ ದೊಡ್ಡ ಸಂಖ್ಯೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಲಾಗಿದೆ. ಅವರಿಂದ ದಂಡ ಸಂಗ್ರಹಿಸಿರುವ ಕುರಿತು ಸರ್ಕಾರ ಈವರೆಗೆ ಮಾಹಿತಿ ನೀಡಿಲ್ಲ. ಹಾಗೆಯೇ ಕೋವಿಡ್ ಮಾರ್ಗಸೂಚಿಗಳನ್ನು ತಮ್ಮ ಸದಸ್ಯರು ಹಾಗೂ ಕಾರ್ಯಕರ್ತರು ಪಾಲಿಸುತ್ತಾರೆ ಎಂಬ ವಿಚಾರವಾಗಿಯೂ ಕನ್ನಡ ಚಳುವಳಿ ವಾಟಾಳ್ ಪಕ್ಷ ಈವರೆಗೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ರಾಜ್ಯ ಸರ್ಕಾರ ನಾಳೆ ನಡೆಯುವ ಬಂದ್ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರಿಗೆ ನಿರ್ದೇಶಿಸಿಬೇಕು. ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸಬೇಕು. ಈ ಕುರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿ. 17ಕ್ಕೆ ಮುಂದೂಡಿತು.
ಇದೇ ವೇಳೆ ಸಿಪಿಐ(ಎಂ) ಪಕ್ಷದ ಪರ ವಕೀಲರು ಹಾಜರಾಗಿ ತಮ್ಮ ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದರು. ಅಲ್ಲದೆ ಮುಂದಿನ ದಿನಗಳಲ್ಲಿ ಈ ಕುರಿತು ನ್ಯಾಯಾಲಯ ನೀಡುವ ನಿರ್ದೇಶನಗಳನ್ನು ಪಾಲಿಸಲು ಪಕ್ಷ ಬದ್ಧವಾಗಿದೆ ಎಂದು ಭರವಸೆ ನೀಡಿದರು.