ಕರ್ನಾಟಕ

karnataka

ಸರ್ಕಾರದಿಂದ ಆ್ಯಕ್ಸಿಜನ್ ಪೂರೈಕೆ: ಬೆಲೆ ನಿಯಂತ್ರಣದ ವರದಿ ಕೇಳಿದ ಹೈಕೋರ್ಟ್

By

Published : Sep 29, 2020, 11:19 PM IST

ಆಕ್ಸಿಜನ್ ಸಿಲಿಂಡರ್​ಗಳು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಪೂರೈಕೆಯಾಗುತ್ತಿವೆಯೇ ಎಂಬ ಬಗ್ಗೆ ಹಾಗೂ ಸಿಲಿಂಡರ್​ಗಳ ಬೆಲೆ ನಿಯಂತ್ರಣಕ್ಕೆ ಸಂಬಂಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿಚಾರಗಳ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶಿಸಿದೆ.

highcourt asks oxyzen supply for hospitals reports
ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿನ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿರುವ ಮತ್ತು ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೊರೊನಾ ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ. ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಈ ನಿರ್ದೇಶನ ನೀಡಿದೆ.

ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲ ವಿಕ್ರಂ ಹುಯಿಲಗೋಳ ಅವರು ಲಿಖಿತ ಮಾಹಿತಿ ಸಲ್ಲಿಸಿ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸುಮಾರು 236 ಮೆಟ್ರಿಕ್ ಟನ್ ಆಮ್ಲಜನಕದ ಬೇಡಿಕೆ ಇದೆ. ಪ್ರಸ್ತುತ 376 ಮೆಟ್ರಿಕ್ ಟನ್ ಆಮ್ಲಜನಕ ಲಭ್ಯತೆ ಇದೆ. ಹೀಗಾಗಿ ಕೈಗಾರಿಕೆಗಳಿಗೆ ಬಳಕೆಯಾಗುವ ಆಕ್ಸಿಜನ್ ಸಿಲಿಂಡರ್​ಗಳನ್ನು ವೈದ್ಯಕೀಯ ಅಗತ್ಯತೆಗಳಿಗೆ ಅನುಗುಣವಾಗಿ ಬಳಸಿಕೊಳ್ಳಲು ಅನುಮತಿ ನೀಡಿ ಆಗಸ್ಟ್ 21ರಂದೇ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೇ, ಆಮ್ಲಜನಕದ ಕೊರತೆಯಾಗದಂತೆ ಆರೋಗ್ಯ ಇಲಾಖೆ ಲಭ್ಯತೆ ಹಾಗೂ ಬಳಕೆ ಕುರಿತಂತೆ ಮೇಲ್ವಿಚಾರಣೆಯ ನೋಡಿಕೊಳ್ಳುತ್ತಿದೆ ಎಂದು ವಿವರಿಸಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಆಮ್ಲಜನಕ ಸಾಕಷ್ಟು ಪ್ರಮಾಣದಲ್ಲಿದೆ ಎಂಬುದೇನೋ ಸರಿ, ಆದರೆ ಆಕ್ಸಿಜನ್ ಸಿಲಿಂಡರ್​ಗಳು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಪೂರೈಕೆಯಾಗುತ್ತಿವೆಯೇ ಎಂಬ ಬಗ್ಗೆ ಹಾಗೂ ಸಿಲಿಂಡರ್​ಗಳ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಮತ್ತು ಯಾವ ಪ್ರಾಧಿಕಾರ ಬೆಲೆ ನಿಯಂತ್ರಿಸುತ್ತದೆ ಎಂಬ ವಿಚಾರಗಳ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿತು.

ABOUT THE AUTHOR

...view details