ಬೆಂಗಳೂರು: ಕಾರವಾರ ಶಾಸಕ ಸತೀಶ್ ಸೈಲ್ ಹಾಗೂ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಾಕ್ಷಿಯಾಗಲು (ಅಪ್ರೂವರ್) ಕಂಪೆನಿಯ ಮಾಜಿ ಉದ್ಯೋಗಿಯೂ ಆದ ಪ್ರಕರಣದ ನಾಲ್ಕನೇ ಆರೋಪಿ ಸುಶೀಲ್ ಕುಮಾರ್ ವಲೇಚಾಗೆ ಅನುಮತಿ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಶಾಸಕ ಸತೀಶ್ ಸೈಲ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯ ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ಪ್ರಕರಣದ ಸತ್ಯಾಸತ್ಯತೆ ತಿಳಿಯುತ್ತದೆ ಎನ್ನುವ ಸಂದರ್ಭದಲ್ಲಿ ಆರೋಪಿಗೆ ಕ್ಷಮಾದಾನ ನೀಡಿ ಸಾಕ್ಷಿಯಾಗಲು ಅನುಮತಿ ನೀಡಲು ಸಂಬಂಧಪಟ್ಟ ನ್ಯಾಯಾಲಯಕ್ಕೆ ಅವಕಾಶವಿದೆ. ಅದರಂತೆ ನ್ಯಾಯಾಲಯವು ತನ್ನ ಅಧಿಕಾರ ಬಳಸಿ ಆರೋಪಿಯನ್ನು ಸಾಕ್ಷಿಯಾಗಲು ಅನುಮತಿ ನೀಡಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಲು ಎಲ್ಲಾ ಪ್ರಯತ್ನ ನಡಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಇದೇ ವೇಳೆ ನಿರ್ದೇಶನ ನೀಡಿದೆ.
ಏನಿದು ಪ್ರಕರಣ?: ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಸತೀಶ್ ಸೈಲ್ ಮತ್ತವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮಲ್ಲಿಕಾಜುರ್ನ ಶಿಪ್ಪಿಂಗ್ ಪ್ರೈ.ಲಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಪ್ರಕರಣ ಸಂಬಂಧ ಸತೀಶ್ ಸೈಲ್ ಬಂಧನಕ್ಕೆ ಒಳಗಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಸಿಬಿಐ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.