ಕರ್ನಾಟಕ

karnataka

ETV Bharat / state

ಹೋಮಿಯೋಪತಿ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಕಡ್ಡಾಯ ಪದ್ಧತಿ ಎತ್ತಿ ಹಿಡಿದ ಹೈಕೋರ್ಟ್

ಹೋಮಿಯೋಪತಿ ಕೋರ್ಸ್​ಗಳಿಗೂ ನೀಟ್​​ ಕಡ್ಡಾಯಗೊಳಿಸಿದ್ದ ನ್ಯಾಷನಲ್ ಹೋಮಿಯೋಪತಿ ಕೌನ್ಸಿಲ್ ಕಾಯಿದೆ 2020ರ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ಉಚ್ಛ ನ್ಯಾಯಾಲಯವು ಎತ್ತಿ ಹಿಡಿದಿದೆ. ಅಭ್ಯರ್ಥಿಗಳಿಗಿಂತ ಸೀಟ್‌ಗಳು ಸಂಖ್ಯೆ ಜಾಸ್ತಿ ಇದೆಯೆಂಬ ಕಾರಣಕ್ಕೆ ಮೆರಿಟ್ ಆಧಾರಿತ ಪ್ರವೇಶದ ಅಗತ್ಯತೆಯನ್ನು ಕೈಬಿಡಲು ಅಸಾಧ್ಯ ಎಂದಿದೆ.

high-court-upholds-neet-mandatory-for-homeopathic-medical-courses
ಹೋಮಿಯೋಪತಿ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಕಡ್ಡಾಯ ಪದ್ಧತಿ ಎತ್ತಿಹಿಡಿದ ಹೈಕೋರ್ಟ್

By

Published : Mar 5, 2023, 7:24 AM IST

Updated : Mar 5, 2023, 7:49 AM IST

ಬೆಂಗಳೂರು :ಹೋಮಿಯೋಪತಿ ಕೋರ್ಸ್​ಗಳಿಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಕಡ್ಡಾಯ ಮಾಡಿದ್ದ ನ್ಯಾಷನಲ್ ಹೋಮಿಯೋಪತಿ ಕೌನ್ಸಿಲ್ ಕಾಯಿದೆ 2020ರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹೋಮಿಯೋಪತಿ ಕೋರ್ಸ್‌ಗೂ ನೀಟ್ ಕಡ್ಡಾಯಗೊಳಿಸಿದ್ದ ನ್ಯಾಷನಲ್ ಹೋಮಿಯೋಪತಿ ಕೌನ್ಸಿಲ್ ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡುವಂತೆ ಕೋರಿ ಕರ್ನಾಟಕ ಖಾಸಗಿ ಹೋಮಿಯೋಪತಿ ಮೆಡಿಕಲ್ ಕಾಲೇಜಸ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ಸ್ ಸೇರಿದಂತೆ ಇತರೆ ಖಾಸಗಿ ಕಾಲೇಜುಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಜಯ್‌ಕುಮಾರ್‌ ಎ. ಪಾಟೀಲ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹೊಂದಿರುವ ಹಕ್ಕು ಸಂಪೂರ್ಣವಾಗಿದ್ದಲ್ಲ. ಅದನ್ನು ಸರ್ಕಾರಗಳು ನಿಯಂತ್ರಿಸಬಹುದಾಗಿದೆ. ಈ ಪರೀಕ್ಷೆಯಲ್ಲಿ ಅರ್ಹ ವಿದ್ಯಾರ್ಥಿಗಳನ್ನು ಬಿಹೆಚ್‌ಎಂಎಸ್ ಕೋರ್ಸ್​ಗೆ ಸೇರಿಸಿಕೊಳ್ಳುವುದು ಮತ್ತು ಆ ವಿದ್ಯಾರ್ಥಿಗಳು ಮುಂದೆ ಚಿಕಿತ್ಸೆ ನೀಡುವಂತವರಾಗುವ ಹಿತಾಸಕ್ತಿಯೂ ಅಡಗಿರಲಿದೆ. ಇದೇ ಕಾರಣದಿಂದ ಎಲ್ಲ ಹೋಮಿಯೋಪತಿ ಕಾಲೇಜುಗಳಲ್ಲಿ ಕೋರ್ಸ್‌ಗಳಿಗೆ ಮೆರಿಟ್ ಆಧಾರದಲ್ಲಿ ನೋಂದಣಿ ಮಾಡುವುದಕ್ಕಾಗಿ ನೀಟ್ ಪರೀಕ್ಷೆಯನ್ನು ಶಾಸನ ಸಭೆ ಕಡ್ಡಾಯಗೊಳಿಸಿದೆ. ಇದಕ್ಕೆ ಕಾಯಿದೆಯ ಸೆಕ್ಷನ್ 14ರ ಪ್ರಕಾರ ಅವಕಾಶ ಕಲ್ಪಿಸಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಭ್ಯರ್ಥಿಗಳಿಗಿಂತಲೂ ಸೀಟ್‌ಗಳು ಸಂಖ್ಯೆ ಹೆಚ್ಚಿವೆ ಎಂಬ ಕಾರಣಕ್ಕೆ ಮೆರಿಟ್ ಆಧಾರಿತ ಪ್ರವೇಶದ ಅವಶ್ಯಕತೆಯನ್ನು ಕೈಬಿಡುವುದಕ್ಕೆ ಸಾಧ್ಯವಿಲ್ಲ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳು ಅರ್ಹತೆಯಿಲ್ಲದಿದ್ದರೂ, ನೋಂದಣಿ ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಪ್ರಕರಣದಲ್ಲಿ ಸೆಕ್ಷನ್ 14ನ್ನು ಜಾರಿ ಮಾಡುವ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಸೇರಿಸಿಕೊಳ್ಳುವ ಅರ್ಜಿದಾರರ ಹಕ್ಕನ್ನು ನಿಯಂತ್ರಿಸಿದಂತೆ ಆಗುವುದಿಲ್ಲ. ಜೊತೆಗೆ, ಅರ್ಜಿದಾರರ ಸಂವಿಧಾನದ ಹಕ್ಕು ಉಲ್ಲಂಘನೆ ಆಗುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೆ, ಕೌನ್ಸಿಲ್‌ನಲ್ಲಿ ಕೇಂದ್ರ ಸರ್ಕಾರ ಅಧಿಕಾರಿಗಳ ಮಾತ್ರ ಇದೆ ಎಂಬ ವಾದವನ್ನು ತಳ್ಳಿ ಹಾಕಿದ ನ್ಯಾಯಪೀಠ, ಕೇಂದ್ರದೊಂದಿಗೆ ಅರೆಕಾಲಿಕ ಸದಸ್ಯರಿದ್ದು, ಕೌನ್ಸಿಲ್ ಕಾಯಿದೆಯಡಿಯಲ್ಲಿಯೇ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಕೇಂದ್ರ ಸರ್ಕಾರ ಹೋಮಿಯೋಪತಿ ಸೆಂಟ್ರಲ್ ಕೌನ್ಸಿಲ್ ಕಾಯಿದೆ 1973 ಅನ್ನು ರದ್ದುಪಡಿಸಿ ರಾಷ್ಟ್ರೀಯ ಹೋಮಿಯೋಪತಿ ಕೌನ್ಸಿಲ್ ಕಾಯಿದೆ 2020ನ್ನು 2020ರ ಸೆಪ್ಟಂಬರ್ 20ರಂದು ಜಾರಿಗೆ ತಂದಿತ್ತು. ಇದರ ಅಧೀನದಲ್ಲಿ ಕೇಂದ್ರ ಸರ್ಕಾರ 2021ರ ಜುಲೈ 5ರಂದು ರಾಷ್ಟ್ರೀಯ ಹೋಮಿಯೋಪತಿ ಆಯೋಗ ರಚನೆ ಮಾಡಿದೆ. ಹೋಮಿಯೋಪತಿ ಕೋರ್ಸ್‌ಗಳಿಗೆ ಸೇರುವವರಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 2021ರ ಜುಲೈ 12ರಂದು ಸಾರ್ವಜನಿಕವಾಗಿ ಪ್ರಕಟಿಸಿ ಆನ್​ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು.

ಅಲ್ಲದೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 2022-23ನೇ ಶೈಕ್ಷಣಿಕ ಸಾಲಿಗೆ ಈ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳು ನೋಂದಣಿಯಾಗುವವರಿಗಾಗಿ 2022ರ ಜುಲೈ 17ರಂದು ನೀಟ್ ಪರೀಕ್ಷೆ ಹಮ್ಮಿಕೊಂಡಿರುವುದಾಗಿ ತಿಳಿಸಿತ್ತು. ಅಲ್ಲದೆ, ರಾಜ್ಯ ಸರ್ಕಾರ 2022ರ ಅಕ್ಟೋಬರ್ 13ರಂದು ಸಭೆ ನಡೆಸಿ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಪಡಿಸುವ ಸಂಬಂಧ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಸಂಬಂಧ ಅರ್ಜಿದಾರ ಸಂಘ ಶುಲ್ಕ ನಿಗದಿಯನ್ನು ಮರು ಪರಿಶೀಲನೆ ನಡೆಸುವಂತೆ ಕೋರಿ 2022ರ ನವೆಂಬರ್ 9ರಂದು ಮನವಿ ಸಲ್ಲಿಸಿತ್ತು.

ಪರೀಕ್ಷಾ ಪ್ರಾಧಿಕಾರದ ಮೂಲಕ ಸುತ್ತೋಲೆ: ಇದರ ಆಧಾರದಲ್ಲಿ ರಾಜ್ಯ ಸರ್ಕಾರ ಸಂಘದ ಪದಾಧಿಕಾರಿಗಳು ಮತ್ತು ಇತರೆ ಪಾಲುದಾರರೊಂದಿಗೆ ಸಭೆ ನಡೆಸಿ 2022-23ರ ಶೈಕ್ಷಣಿಕ ಸಾಲಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ವಾರ್ಷಿಕ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಕುರಿತಂತೆ 2022ರ ಅಕ್ಟೋಬರ್ 13ರಂದು ಆದೇಶ ಹೊರಡಿಸಿತ್ತು. ಜೊತೆಗೆ, 2022ರ ಡಿಸೆಂಬರ್ 6ರಂದು ಈ ಕೋರ್ಸ್​ಗಳ ಅಧ್ಯಯನಕ್ಕೆ ದಿನಾಂಕಗಳನ್ನು ಪ್ರಕಟಿಸಿತ್ತು. ಅದರಲ್ಲಿ ಅಕ್ಟೋಬರ್ 1ರಿಂದ ತರಗತಿಗಳನ್ನು ಪ್ರಾರಂಭಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು. 2022ರ ಡಿಸೆಂಬರ್ 13ರಂದು ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಮತ್ತೊಂದು ಸುತ್ತೋಲೆ ಹೊರಡಿಸಿ ನಿಯಮಗಳ ಪ್ರಕಾರ ಹೋಮಿಯೋಪತಿ ಕೋರ್ಸ್‌ಗಳ ಸೀಟು ಭರ್ತಿ ಮಾಡುವಂತೆ ಸೂಚನೆ ನೀಡಲಾಗಿತ್ತು.

ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ:2022-23ರ ಶೈಕ್ಷಣಿಕ ವರ್ಷದಲ್ಲಿ ದೊಡ್ಡ ಪ್ರಮಾಣ ಸೀಟ್‌ಗಳು ಖಾಲಿಯಾಗಿವೆ. ಹೀಗಾಗಿ ಅವುಗಳ ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್​ನಲ್ಲಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಮತ್ತೊಂದು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ನೀಟ್ ಪರೀಕ್ಷೆ ಇಲ್ಲದೆಯೂ ಶೈಕ್ಷಣಿಕವಾಗಿ ಅರ್ಹವಿರುವ ವಿದ್ಯಾರ್ಥಿಗಳಿಗೆ ನೋಂದಣಿಗೆ ಅವಕಾಶ ನೀಡಿ 2022ರ ನವೆಂಬರ್ 22ರಂದು ಮಧ್ಯಂತರ ಆದೇಶ ಮಾಡಿತ್ತು. ಈ ಆದೇಶ ಪ್ರಶ್ನಿಸಿ ರಾಷ್ಟ್ರೀಯ ಹೋಮಿಯೋಪತಿ ಕೌನ್ಸಿಲ್ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ನೀಟ್ ಪರೀಕ್ಷೆ ಇಲ್ಲದೆಯೂ ಹೋಮಿಯೋಪತಿ ಕೋರ್ಸ್‌ಗಳಿಗೆ ಸೇರ್ಪಡೆಗೆ ಅವಕಾಶ ಕಲ್ಪಿಸಿದ್ದ ಆದೇಶವನ್ನು ರದ್ದುಗೊಳಿಸಿತ್ತು. ಅಲ್ಲದೆ, ಈ ಅರ್ಜಿಯನ್ನು ಮತ್ತೆ ಹೈಕೋರ್ಟ್​ಗೆ ಹಿಂದಿರುಗಿಸಿ ಪ್ರವೇಶಕ್ಕೆ ನಿಗದಿಪಡಿಸಿರುವ ಅಂತಿಮ ದಿನಾಂಕಕ್ಕೂ ಮುನ್ನ ಅರ್ಹತೆಯ ಆಧಾರದ ಮೇಲೆ ಆದೇಶ ನೀಡುವಂತೆ ಸೂಚನೆ ನೀಡಿತ್ತು.

ಇದನ್ನೂ ಓದಿ:ಸರ್ಕಾರಿ ಪದವಿ ಕಾಲೇಜು: 1,209 ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆ ಪಟ್ಟಿ ಪ್ರಕಟ

Last Updated : Mar 5, 2023, 7:49 AM IST

ABOUT THE AUTHOR

...view details