ಬೆಂಗಳೂರು:ಹೂಡಿಕೆದಾರರಿಗೆ ವಂಚನೆ ಎಸಗಿರುವ ಆರೋಪ ಪ್ರಕರಣ ಸಂಬಂಧಿಸಿದಂತೆ ಅಗ್ರಿಗೋಲ್ಡ್ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ತಕ್ಷಣವೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ಅಗ್ರಿಗೋಲ್ಡ್ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥರಾದ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಪೀಠಕ್ಕೆ ಮಾಹಿತಿ ನೀಡಿ, ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಸುಮಾರು 32 ಲಕ್ಷ ಹೂಡಿಕೆದಾರರಿದ್ದಾರೆ. ಇವರಲ್ಲಿ ರಾಜ್ಯದ 8.50 ಲಕ್ಷ ಹೂಡಿಕೆದಾರರು ಕಂಪನಿಯ ವಿವಿಧ ಶಾಖೆಗಳಲ್ಲಿ ಹಣ ತೊಡಗಿಸಿದ್ದಾರೆ. ತೆಲಂಗಾಣ ರಾಜ್ಯದಲ್ಲೂ ಅಗ್ರಿಗೋಲ್ಡ್ ಸಂಸ್ಥೆ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆ ತೆಲಂಗಾಣ ಸರ್ಕಾರ ಸಂಸ್ಥೆಗೆ ಸೇರಿದ ಒಟ್ಟು 290 ಆಸ್ತಿಗಳನ್ನು ಜಪ್ತಿ ಮಾಡಿದೆ. ಇವುಗಳಲ್ಲಿ ಕರ್ನಾಟಕದ ಆಸ್ತಿಗಳೂ ಸೇರಿವೆ ಎಂದು ವಿವರಿಸಿದರು.