ಕರ್ನಾಟಕ

karnataka

ETV Bharat / state

ಮುಸ್ಲಿಂ ಮತ ಬೇಡ ಎಂಬ ಹೇಳಿಕೆ: ಈಶ್ವರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್​ ತಡೆ

ಭಾಷಣ ಮಾಡುವ ಸಂದರ್ಭದಲ್ಲಿ ಕೆ.ಎಸ್ ಈಶ್ವರಪ್ಪ ನಮಗೆ ಮುಸ್ಲಿಂ ಮತ ಬೇಡ ಎಂದು ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವರದಿಯಾಗಿತ್ತು.

ಹೈಕೋರ್ಟ್​
ಹೈಕೋರ್ಟ್​

By ETV Bharat Karnataka Team

Published : Dec 1, 2023, 10:49 PM IST

ಬೆಂಗಳೂರು :ನಮಗೆ ಮುಸ್ಲಿಮರ ಮತ ಬೇಡ ಎಂಬುದಾಗಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಕೋರಿ ಕೆ.ಎಸ್. ಈಶ್ವರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ , ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣ ದಾಖಲಾಗಿದ್ದಾಗ ಅರ್ಜಿದಾರರು ಹಾಲಿ ಶಾಸಕರಾಗಿದ್ದರು. ಹಾಗಾಗಿ ಜನಪ್ರತಿನಿಧಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಲು ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ. ಅದರಂತೆ ಪೊಲೀಸರು ಪಡೆದುಕೊಂಡ ಅನುಮತಿ ಊರ್ಜಿತವಾಗುವುದಿಲ್ಲ. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 125ರ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಶಿವಮೊಗ್ಗದ ಮ್ಯಾಜಿಸ್ಟ್ರೇಟ್‌ನಿಂದ ಅನುಮತಿ ಪಡೆದು ದಾಖಲಿಸಿಕೊಂಡಿರುವ ಎಫ್‌ಐಆರ್ ಆಧರಿಸಿ ನಡೆದ ತನಿಖೆಯ ಅಂತಿಮ ವರದಿಯನ್ನು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಾಯಾಲಯಕ್ಕೆ ಸಲ್ಲಿಸಲಾಗಿದೆ. ಖಾಸಗಿ ಸುದ್ದಿ ಸಂಸ್ಥೆಯ ಎಕ್ಸ್​ ಖಾತೆಯಲ್ಲಿ ಬಂದ ಮಾಹಿತಿ ಆಧರಿಸಿ ದೂರು ದಾಖಲಿಸಲಾಗಿದೆ. ಉಳಿದಂತೆ ಪ್ರಕರಣದಲ್ಲಿ ಯಾವುದೇ ಬಲವಾದ ಸಾಕ್ಷಿ-ಪುರಾವೆಗಳಿಲ್ಲ. ಆದ್ದರಿಂದ ಇಂತಹ ಪ್ರಕರಣದ ತನಿಖೆ ಕಾನೂನಿನ ದುರ್ಬಳಕೆ ಆಗಲಿದ್ದು, ಪ್ರಕರಣ ರದ್ದುಪಡಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.

ಪ್ರಕರಣದ ಹಿನ್ನೆಲೆ ಏನು ? :ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಶಿವಮೊಗ್ಗದ ಮನೆಯ ಆವರಣದಲ್ಲಿ 2023ರ ಏ.25ರಂದು ನಡೆದ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಕೆ.ಎಸ್ ಈಶ್ವರಪ್ಪ ಭಾಷಣ ಮಾಡಿದ್ದರು. ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ 50ರಿಂದ 55 ಸಾವಿರ ಮುಸ್ಲಿಂ ಮತದಾರರು ಇದ್ದಾರೆ. ಆದರೆ, ನಮಗೆ ಒಂದೇ ಒಂದು ಮುಸ್ಲಿಂ ಮತ ಬೇಡ ಎಂದು ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವರದಿಯಾಗಿತ್ತು.

ಇದನ್ನು ಆಧರಿಸಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಫ್ಲಾಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಎಚ್. ಮಹೇಶ್ ಅವರು ಮೇ 6ರಂದು ರಂದು ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಧೀಶರು ಪ್ರಕರಣದ ತನಿಖೆಗೆ ವಿನೋಬಾನಗರ ಪೊಲೀಸರಿಗೆ ಅನುಮತಿ ನೀಡಿದ್ದರು. ಅದರಂತೆ, ಮೇ 8ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಡಿ.2ಕ್ಕೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಇದೀಗ ಹೈಕೋರ್ಟ್ ಅದಕ್ಕೆ ತಡೆ ನೀಡಿದೆ.

ಇದನ್ನೂ ಓದಿ :ಅಗ್ನಿಶಾಮಕ ದಳ ಕಾಯಿದೆ ಉಲ್ಲಂಘನೆ ಆರೋಪ: ಸಚಿವ ಬೈರತಿ ಸುರೇಶ್​ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್

ABOUT THE AUTHOR

...view details