ಬೆಂಗಳೂರು: ಪರಿಸರ ಸ್ನೇಹಿ ಹಸಿರು ಪಟಾಕಿ ಮಾರಾಟಕ್ಕೆ ಷರತ್ತು ಬದ್ಧ ಅನುಮತಿ ನೀಡಿರುವ ಹೈಕೋರ್ಟ್, ಈ ಕುರಿತು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಪ್ರಸಕ್ತ ವರ್ಷ ಕೊರೊನಾ ಸೋಂಕು ಇರುವ ಕಾರಣ ಪಟಾಕಿ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿ ಚಾರ್ಟರ್ಡ್ ಅಕೌಂಟೆಂಟ್ ಡಾ.ಎ.ಎಸ್ ವಿಷ್ಣುಭರತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲರು ಹಸಿರು ಪಟಾಕಿಗೆ ಸಂಬಂಧಿಸಿದ ವಿವರಣೆ ನೀಡಿದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರಾದ ಬಿ.ಕೆ ನರೇಂದ್ರ ಬಾಬು ಅವರು, ಪಟಾಕಿ ಬಳಕೆಯಿಂದ ವಾಯು ಮಾಲಿನ್ಯ ಉಂಟಾಗಲಿದೆ. ಹಬ್ಬದ ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನಿಸಿದರೆ ದೀಪ ಹಚ್ಚುವುದು ಮುಖ್ಯವೇ ಹೊರತು ಪಟಾಕಿ ಸಿಡಿಸುವುದಲ್ಲ. ಕೊರೊನಾ ಸಂದರ್ಭದಲ್ಲಿ ಪಟಾಕಿಗೆ ಅನುಮತಿ ನೀಡಿದರೆ ವಾಯು ಮಾಲಿನ್ಯ ಹೆಚ್ಚಿ ಕಾಯಿಲೆಯೂ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದರು. ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ಕೂಡ ಪಟಾಕಿ ನಿರ್ಬಂಧ ಸೂಕ್ತ ಎಂದರು.
ಆದರೆ, ಪಟಾಕಿ ನಿಷೇಧ ಕೋರಿ ಅರ್ಜಿ ಸಲ್ಲಿಸುವಿಕೆ ತಡವಾಗಿದೆ ಎಂಬುದನ್ನು ಪರಿಗಣಿಸಿದ ಪೀಠ, ’ನೀರಿ’ (NEERI) ಪ್ರಮಾಣಿತ ಹಸಿರು ಪಟಾಕಿಗೆ ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿತು. ನವೆಂಬರ್ 6, 10 ಹಾಗೂ 12 ರಂದು ಸರ್ಕಾರ ಹೊರಡಿಸಿರುವ ಆದೇಶಗಳಿಗೆ ಅನುಗುಣವಾಗಿ ಹಸಿರು ಪಟಾಕಿಗಳನ್ನಷ್ಟೇ ಮಾರಾಟವಾಗುವಂತೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಪಟಾಕಿ ಮಾರಾಟ ಮಳಿಗೆಗಳಿಗೆ ತೆರಳಿ ಅಲ್ಲಿ ’ನೀರಿ’ ಪ್ರಮಾಣಿತ, ಹಸಿರು ಚಿನ್ಹೆ ಹೊಂದಿರುವ ಪಟಾಕಿಗಳನ್ನಷ್ಟೇ ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿತು.
ಹಸಿರು ಪಟಾಕಿಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಎಲ್ಲ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ನೀಡಬೇಕು. ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಶಬ್ಧ - ವಾಯು ಮಾಲಿನ್ಯ ಅಳೆಯಬೇಕು. ಆ ಆದೇಶದ ಅನುಪಾಲನಾ ವರದಿಯನ್ನು ಸರ್ಕಾರ ಹಾಗೂ ಬಿಬಿಎಂಪಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿತು.
ಇದೇ ವೇಳೆ, ಪಟಾಕಿಗಳ ಬಳಕೆಯಿಂದ ಮಾಲಿನ್ಯ ಹೆಚ್ಚಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಮಾಮ ಬೀರಲಿದೆ. ಸ್ವಲ್ಪ ಮುಂಚಿತವಾಗಿ ಅರ್ಜಿ ಸಲ್ಲಿಸಿದ್ದರೆ, ಪಟಾಕಿ ನಿರ್ಬಂಧಿಸುವ ಕುರಿತು ಕಠಿಣ ಆದೇಶ ಹೊರಡಿಸಬಹುದಿತ್ತು. ಆದರೆ, ಅರ್ಜಿದಾರರು ತಡವಾಗಿ ಪಿಐಎಲ್ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.