ಕರ್ನಾಟಕ

karnataka

ETV Bharat / state

15 ವರ್ಷ ಹಿಂದಿನ ಅಪಘಾತ ಪ್ರಕರಣ: ಬೈಕ್ ಸವಾರನ ತಪ್ಪು ಸಾಬೀತು, ಪರಿಹಾರ ₹85 ಸಾವಿರಕ್ಕೆ ಇಳಿಕೆ - ಅಪಘಾತ ಪರಿಹಾರ ವಿಮೆ

High court on road accident compensation: 15 ವರ್ಷದ ಹಿಂದಿನ ರಸ್ತೆ ಅಪಫಾತ ಪ್ರಕರಣದಲ್ಲಿ ಬೈಕ್ ಸವಾರನಿಗೆ ನೀಡಿದ್ದ ಪರಿಹಾರದ ಮೊತ್ತವನ್ನು ₹85 ಸಾವಿರಕ್ಕಿಳಿಸಿ ಹೈಕೋರ್ಟ್ ತೀರ್ಪು ನೀಡಿದೆ.

Etv Bharat
Etv Bharat

By ETV Bharat Karnataka Team

Published : Nov 28, 2023, 8:09 AM IST

ಬೆಂಗಳೂರು: 15 ವರ್ಷದ ಹಿಂದೆ ಕನಕಪುರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಶೇ.75ರಷ್ಟು ಬೈಕ್ ಸವಾರನದ್ದೇ ತಪ್ಪೆಂದು ತೀರ್ಮಾನಿಸಿರುವ ಹೈಕೋರ್ಟ್, ಸವಾರನಿಗೆ ನೀಡಿದ್ದ ಪರಿಹಾರದ ಮೊತ್ತವನ್ನು 3.4 ಲಕ್ಷ ರೂ.ಗಳಿಂದ 85 ಸಾವಿರಕ್ಕೆ ಕಡಿತಗೊಳಿಸಿ ಆದೇಶಿಸಿತು.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ನೇತೃತ್ವದ ಏಕಸದಸ್ಯ ಪೀಠ, ಈ ಆದೇಶ ಮಾಡಿದೆ. ಅಲ್ಲದೆ, ಶೇ.6ರ ಬಡ್ಡಿ ಸೇರಿಸಿ ಕನಕಪುರದ ವೀರಭದ್ರಗೆ 84,500 ರೂ. ಪರಿಹಾರ ಬಿಡುಗಡೆ ಮಾಡುವಂತೆ ಸೂಚಿಸಿದೆ. ಮೋಟಾರು ವಾಹನ ಅಪಘಾತ ಪರಿಹಾರ ಮಂಡಳಿಯು ಕೆಎಸ್‌ಆರ್​ಟಿಸಿ ಬಸ್ ಚಾಲಕನದ್ದು ಶೇ.90ರಷ್ಟು, ಬೈಕ್ ಸವಾರನದ್ದು ಶೇ.10ರಷ್ಟು ತಪ್ಪಿದೆ ಎಂದು ಸವಾರನಿಗೆ 3.4 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದೆ. ಆದರೆ, ಘಟನಾ ಸ್ಥಳದ ಮಹಜರು, ಫೋಟೋ ಮತ್ತು ಸಾಕ್ಷ್ಯಗಳನ್ನು ಆಧರಿಸಿ ಶೇ.75ರಷ್ಟು ತಪ್ಪು ಬೈಕ್ ಸವಾರನದ್ದಾಗಿದೆ ಎಂದು ಹೇಳಿ ಪರಿಹಾರದ ಮೊತ್ತವನ್ನು ಇಳಿಕೆ ಮಾಡುತ್ತಿರುವುದಾಗಿ ಪೀಠ ಹೇಳಿತು.

ದಾಖಲೆಗಳ ಪ್ರಕಾರ, ಬಸ್‌ನ ಬಲಭಾಗದ ಒಂದು ಚಕ್ರ ಪಾದಚಾರಿ ಮಾರ್ಗದ ಮೇಲಿದೆ, ಅದರ ಹಿಂದಿನ ಚಕ್ರ ರಸ್ತೆಯ ಮೇಲಿದೆ. ಬೈಕ್ ಬಸ್‌ನ ಮುಂಭಾಗದ ಬಂಪರ್ ಕೆಳಗೆ ಬಿದ್ದಿದೆ. ಚಾಲಕ ಅಪಘಾತ ತಪ್ಪಿಸಲು ಪ್ರಯತ್ನಿಸಿದ್ದಾನೆ. ಹಾಗಾಗಿ ಬಸ್ ಚಾಲಕನದ್ದೇ ಶೇ.90ರಷ್ಟು ತಪ್ಪಿದೆ ಎಂಬ ನ್ಯಾಯಮಂಡಳಿ ಆದೇಶ ಸರಿಯಲ್ಲ. ಘಟನೆಯಲ್ಲಿ ಬೈಕ್ ಸವಾರನದ್ದೇ ಶೇ.75ರಷ್ಟು ತಪ್ಪಾಗಿದೆ. ಹಾಗಾಗಿ ಪರಿಹಾರವನ್ನು ಕಡಿತಗೊಳಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ:2008ರ ಮಾ.4ರಂದು ಸಾತನೂರಿಂದ ಕನಕಪುರದ ಕಡೆಗೆ ಹೊರಟಿದ್ದ ಕೆಎಸ್‌ಆರ್​ಟಿಸಿ ಬಸ್ ಚಿಕ್ಕಗೌಡನಹಳ್ಳಿ ಬಳಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಆಗ ಗಾಯಗೊಂಡಿದ್ದ ಕನಕಪುರದ ವಾಸಿ ವೀರಭದ್ರ, ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣವಾಗಿದೆ. ಹಾಗಾಗಿ ತಮಗೆ 10 ಲಕ್ಷ ರೂ. ಪರಿಹಾರ ಕೊಡಿಸಬೇಕೆಂದು ಕೋರಿ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ, ಕೆಎಸ್‌ಆರ್​​ಟಿಸಿ ಪರ ವಕೀಲರು ಮೋಟಾರು ವಾಹನ ಅಪಘಾತ ಪರಿಹಾರ ಮಂಡಳಿ ಸಲ್ಲಿಸಿದ್ದ ಸಾಕ್ಷ್ಯಗಳಿಗೆ ವಿರುದ್ಧವಾದ ತೀರ್ಪು ನೀಡಿದೆ. ಪ್ರಕರಣದಲ್ಲಿ ಬೈಕ್ ಸವಾರನದ್ದೇ ತಪ್ಪಿದ್ದರೂ ಆತನಿಗೆ ಪರಿಹಾರಕ್ಕೆ ಆದೇಶ ನೀಡಿದೆ. ಹಾಗಾಗಿ ನ್ಯಾಯಮಂಡಳಿ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ: ಸಿವಿಲ್ ವ್ಯಾಜ್ಯಗಳ ಸೆಟಲ್ಮೆಂಟ್ ಕೇಂದ್ರಗಳಾಗುತ್ತಿರುವ ಪೊಲೀಸ್ ಠಾಣೆಗಳು: ಹೈಕೋರ್ಟ್ ಗರಂ

ABOUT THE AUTHOR

...view details