ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆಪ್ತೆ ಮತ್ತು ವಿ ಕೆ ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲು ಲಂಚ ಪಡೆದ ಆರೋಪದಲ್ಲಿ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್, ಕರ್ನಾಟಕ ಕಾರಾಗೃಹ ಅಕಾಡೆಮಿಯ ಉಪ ನಿರ್ದೇಶಕಿ ಡಾ ಆರ್ ಅನಿತಾ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಇನ್ಸ್‌ಪೆಕ್ಟರ್ ಗಜರಾಜ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಕುರಿತ ಪ್ರಾಸಿಕ್ಯೂಷನ್‌ಗೆ, ತಮ್ಮ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಕೈಗೊಂಡಿದ್ದ ತನಿಖೆ (ಎಸಿಬಿ) ರದ್ದುಪಡಿಸುವಂತೆ ಕೋರಿ ಪೊಲೀಸ್ ಅಧಿಕಾರಿಗಳಾದ ಗಜರಾಜ ಮಾಕನೂರ್, ಡಾ.ಆರ್.ಅನಿತಾ ಮತ್ತು ಕೃಷ್ಣಕುಮಾರ್ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠ ಈ ಆದೇಶ ಮಾಡಿದೆ. ಕೃಷ್ಣಕುಮಾರ್ ವಿರುದ್ಧ ತನಿಖಾಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಕೃಷ್ಣಕುಮಾರ್ ಅವರು ಲಂಚಕ್ಕೆ ಬೇಡಿಕೆಯಿಟ್ಟ ಮತ್ತು ಸ್ವೀಕರಿಸಿದ ಬಗ್ಗೆ ನೇರ-ನಿರ್ದಿಷ್ಟ ಆರೋಪಗಳು ಇಲ್ಲ. ಅವರ ವಿರುದ್ಧ ಇಲಾಖೆ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ದೋಷಿಯಾಗಿ ಸಾಬೀತಾಗಿಲ್ಲ.
ಹೀಗಿರುವಾಗ ಇದೇ ಆರೋಪದ ಸಂಬಂಧ ಡಾ.ಅನಿತಾ ವಿರುದ್ಧ ಪ್ರಕರಣಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಆದರೆ, ಕೃಷ್ಣ ಕುಮಾರ್ ವಿರುದ್ಧದ ಪ್ರಕರಣ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಮತ್ತೊಂದಡೆ ಸತ್ಯನಾರಾಯಣ ವಿರುದ್ಧದ ಆರೋಪಗಳನ್ನು ಸರ್ಕಾರ ಕೈಬಿಡಲಾಗಿದೆ. ಹೀಗಿರುವಾಗ ಕೃಷ್ಣ ಕುಮಾರ್ ವಿರುದ್ಧದ 2021ರ ಡಿ.23ರಂದು ಪೂರ್ವಾನುಮತಿ ನೀಡಿರುವ ರಾಜ ಗೃಹ ಇಲಾಖೆ ಅಧೀನ ಕಾರ್ಯದರ್ಶಿಯ ಕ್ರಮ ವಿವೇಚನೆ ರಹಿತವಾಗಿದೆ. ಆದ್ದರಿಂದ ಕೃಷ್ಣ ಕುಮಾರ್ ವಿರುದ್ಧದ ಪ್ರಕರಣ ಮತ್ತು ಅವರ ವಿರುದ್ಧ ಕ್ರಮ ಜರುಗಿಸಲು ನೀಡಿರುವ ಪೂರ್ವಾನುಮತಿ ರದ್ದುಪಡಿಸಲು ಅರ್ಹವಾಗಿದೆ ಎಂದು ಆದೇಶಿಸಿದೆ.
ಇದೇ ವೇಳೆ ಪ್ರಕರಣದ ಮೊದಲನೇ ಆರೋಪಿಯಾಗಿರುವ ಕೃಷ್ಣಕುಮಾರ್ ವಿರುದ್ಧ ವಿವೇಚನೆ ಬಳಸಿ ಪೂರ್ವಾನುಮತಿ ನೀಡುವ ಕುರಿತಂತೆ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಲು ಸಕ್ಷಮ ಪ್ರಾಧಿಕಾರ ಮುಕ್ತವಾಗಿದೆ ಎಂದು ತಿಳಿಸಿದೆ. ಅಲ್ಲದೆ, ಪ್ರಕರಣದಲ್ಲಿ ಶಶಿಕಲಾ ಅವರಿಂದ 2 ಕೋಟಿ ರೂ. ಲಂಚ ಪಡೆದು ಐಷಾರಾಮಿ ಸೌಲಭ್ಯ ಕಲ್ಪಿಸಿದ್ದರು ಎನ್ನಲಾಗಿದ್ದ ಕಾರಾಗೃಹ ಇಲಾಖೆಯ ನಿವೃತ್ತ ಡಿಜಿಪಿ ಎಚ್.ಎನ್. ಸತ್ಯನಾರಾಯಣ ಅವರು ಪ್ರಮುಖ ಆರೋಪಿಯಾಗಿದ್ದರು. ಅವರ ವಿರುದ್ಧ ಆರೋಪಗಳನ್ನು ಕೈ ಬಿಡಲಾಗಿದೆ.
ಆದರೆ,ಎಸಿಬಿ ತನಿಖಾಧಿಕಾರಿಗಳು ಡಾ.ಅನಿತಾ ಮತ್ತು ಇತರೆ ಸಿಬ್ಬಂದಿಯನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಡಾ.ಅನಿತಾ ಅವರು ತಮ್ಮ ಉನ್ನತಾಧಿಕಾರಿಯಾಗಿದ್ದ ಮುಖ್ಯ ಜೈಲು ಅಧೀಕ್ಷಕ ಕೃಷ್ಣ ಕುಮಾರ್ ಸೂಚನೆಯಂತೆ ನಡೆದುಕೊಂಡಿದ್ದಾರೆ. ಆದರೆ, ಅನಿತಾ ವಿರುದ್ಧದ ವಿಚಾರಣೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ (ಕೆಎಟಿ) ರದ್ದುಪಡಿಸಿದ್ದು, ಅದರ ಆಧಾರದ ಮೇಲೆ ಆಕೆ ವಿರುದ್ಧ ವಿಚಾರಣೆ ಸರ್ಕಾರ ಕೈಬಿಟ್ಟಿದೆ.