ಬೆಂಗಳೂರು: ದಂಪತಿ ನಡುವಿವ ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಪತ್ನಿಗೆ ಕಾನೂನು ಪ್ರಕಾರ ಸಮನ್ಸ್ ಜಾರಿ ಮಾಡದೇ ಏಕಪಕ್ಷೀಯವಾಗಿ ವಿಚಾರಣೆ ನಡೆಸಿ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರಿನ ವಿನೋಬಾನಗರದ ಮಹಿಳೆಯೊಬ್ಬರು 2017ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ನಾಗರಿಕ ಪ್ರಕ್ರಿಯೆ ಸಂಹಿತೆಯ (ಸಿಪಿಸಿ) ನಿಯಮ 17ರ ಪ್ರಕಾರ ಪ್ರತಿವಾದಿಯು ಸಮನ್ಸ್ ಸ್ವೀಕೃತಿಗೆ ಸಹಿ ಹಾಕದಿದ್ದರೆ ಅಥವಾ ಸಮನ್ಸ್ ನೀಡುವ ಸಂದರ್ಭದಲ್ಲಿ ಮನೆಯಲ್ಲಿರದಿದ್ದರೆ, ಅಲ್ಲಿಗೆ ತೆರಳಿದ್ದ ಅಧಿಕಾರಿ ಪ್ರತಿವಾದಿಯ ಮನೆಯ ಮುಂಬಾಗಿಲಿನ ಮೇಲೆ ಅಥವಾ ಮನೆಯ ಯಾವುದಾದರೂ ಒಂದು ಎದ್ದು ಕಾಣಬಹುದಾದ ಜಾಗದಲ್ಲಿ ಸಮನ್ಸ್ ಪ್ರತಿಯನ್ನು ಅಂಟಿಸಿ, ಮೂಲ ಪ್ರತಿಯನ್ನು ನ್ಯಾಯಾಲಯಕ್ಕೆ ಹಿಂದಿರುಗಿಸಬೇಕು ಎಂದು ಹೇಳಲಾಗಿದೆ.
ಅಲ್ಲದೆ, ಯಾವ ಕಾರಣಕ್ಕೆ ಆ ರೀತಿ ಮಾಡಲಾಗಿದೆ ಎಂಬ ಕಾರಣದ ಜತೆಗೆ, ಮನೆಯನ್ನು ಗುರುತಿಸಿದ ವ್ಯಕ್ತಿಯ ಹೆಸರು ಹಾಗೂ ವಿಳಾಸ ಮತ್ತು ಯಾರ ಉಪಸ್ಥಿತಿಯಲ್ಲಿ ಸಮನ್ಸ್ ಕಾಪಿಯನ್ನು ಅಂಟಿಸಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು. ಪ್ರಕರಣದಲ್ಲಿ ಈ ಪ್ರಕ್ರಿಯೆ ಪಾಲನೆಯಾಗಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ರಿಜಿಸ್ಟರ್ಡ್ ಪೋಸ್ಟ್ ಮೂಲಕ ಸಮನ್ಸ್ ಜಾರಿ ಮಾಡಿದ್ದು, ಅದರ ಲಕೋಟೆಯ ಮೇಲಿದ್ದ ಸ್ವೀಕರಿಸಿಲ್ಲ ಎಂಬ ಹಿಂಬರಹದ ಆಧಾರದ ಮೇಲೆ ನ್ಯಾಯಾಲಯ ಪ್ರಕರಣವನ್ನು ಏಕಪಕ್ಷೀಯವಾಗಿ ನಿರ್ಧರಿಸಿದೆ.