ಬೆಂಗಳೂರು:ನ್ಯಾಯಾಲಯದ ಆದೇಶದ ಹೊರತಾಗಿಯೂ ನಗರದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಪಾಲಿಕೆ ಮುಖ್ಯ ಎಂಜಿನಿಯರ್ನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ.
ಈ ಕುರಿತು ನಗರದ ವಿಜಯನ್ ಮೆನನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದೆ. ವಿಚಾರಣೆ ವೇಳೆ ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನಗರದ ರಸ್ತೆಗಳನ್ನು ಸರಿಪಡಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಈ ವಿಫಲತೆಗೆ ಪಾಲಿಕೆಯ ಮುಖ್ಯ ಎಂಜನಿಯರ್ ಹೊಣೆ. ಅವರನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಕಟು ಎಚ್ಚರಿಕೆ ನೀಡಿತು. ಅಲ್ಲದೇ, ಈ ಕುರಿತು ಫೆ,7ರಂದು ಮುಖ್ಯ ಎಂಜಿನಿಯರ್ ವಿಚಾರಣೆಗೆ ಹಾಜರಾಗಬೇಕು ಎಂದು ತಾಕೀತು ಮಾಡಿತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಲ್ಲದೇ, ಪ್ರತಿ ಬಾರಿ ಮಳೆ ಬಂದಾಗಲೂ ನಗರದ ರಸ್ತೆಗಳು ಗುಂಡಿಮಯವಾಗುತ್ತವೆ. ರಸ್ತೆ ನಿರ್ಮಿಸಿದ ಮೇಲೆ ಮತ್ತೊಂದು ಕಾಮಗಾರಿಗೆ ಮತ್ತೆ ರಸ್ತೆ ಅಗೆಯಲಾಗುತ್ತಿದೆ. ಬಿಡಬ್ಲುಎಸ್ಎಸ್ ಬಿ, ಬೆಸ್ಕಾಂ ಹಾಗೂ ಬಿಬಿಎಂಪಿ ನಡುವೆ ಸಮನ್ವಯತೆ ಇಲ್ಲ. ಇಂತಹ ವಿಷಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಎಂಜನಿಯರ್ ಮೇಲೆ ಎಫ್ಐಆರ್ ದಾಖಲಿಸಬೇಕಿದೆ.
ಬಿಬಿಎಂಪಿ ಹೀಗೆ ನಡೆದುಕೊಂಡರೆ ರಸ್ತೆ ನಿರ್ವಹಣೆ ಕೆಲಸವನ್ನು ಪಾಲಿಕೆ ಬದಲು ಬೇರೆ ಏಜೆನ್ಸಿಗೆ ಹೊಣೆ ನೀಡಬೇಕಾಗುತ್ತದೆ ಎಂದು ಪಾಲಿಕೆಗೆ ಎಚ್ಚರಿಕೆ ನೀಡಿತು. ಹಾಗೆಯೇ, ನಗರದ ಪ್ರಮುಖ ರಸ್ತೆಗಳಲ್ಲಿ 30 ಕಿ.ಮೀ ಗುಂಡಿಗಳಿವೆ. ಇತರೆಡೆ 482 ಕಿ.ಮೀ. ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಯಾವ ತಂತ್ರಜ್ಞಾನ ಬಳಸಿ ರಸ್ತೆ ಗುಂಡಿ ಮುಚ್ಚುತ್ತಿದ್ದಾರೆಂಬ ಬಗ್ಗೆಯೂ ಪಾಲಿಕೆ ಮಾಹಿತಿ ನೀಡಿಲ್ಲ. ರಸ್ತೆ ನಿರ್ಮಿಸಲು ಹಾಗೂ ದುರಸ್ತಿ ಮಾಡುವ ಕುರಿತು ತಜ್ಞರ ಸಲಹೆ ಪಡೆದಿದ್ದಾರಾ ಎಂಬ ಬಗ್ಗೆಯೂ ಬಿಬಿಎಂಪಿ ಮಾಹಿತಿ ನೀಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಇದನ್ನೂ ಓದಿ:ಇನ್ಮುಂದೆ ಸೂಪರ್‌ಮಾರ್ಕೆಟ್, ಜನರಲ್ ಸ್ಟೋರ್ಗಳಲ್ಲೂ ಸಿಗಲಿದೆ ವೈನ್!