ಬೆಂಗಳೂರು: ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಕಬ್ಬಿಣದ ಧ್ವಜ ಕಂಬ ನೆಡುವ ವೇಳೆ, ವಿದ್ಯುತ್ ಕಂಬಕ್ಕೆ ತಾಕಿದ್ದರಿಂದ ವಿದ್ಯುತ್ ಪ್ರವಹಿಸಿ ಮೃತಪಟ್ಟ ಬಾಲಕನ ಪೋಷಕರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಘಟನೆಯಲ್ಲಿ ಗಾಯಗೊಂಡಿರುವ ಮತ್ತಿಬ್ಬರು ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಮತ್ತು ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಹೈಕೋರ್ಟ್ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ:ಧ್ವಜ ಸ್ತಂಭ ನೆಡುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು, ಶಿಕ್ಷಣ ಸಚಿವರ ಸಂತಾಪ
ಕೆಲ ಕಾಲ ವಿಚಾರಣೆ ನಡೆಸಿದ ಪೀಠ, ಮೃತ ಬಾಲಕನ ಪೋಷಕರಿಗೆ ಪರಿಹಾರ ನೀಡುವ ಕುರಿತು ಹಾಗೂ ಗಾಯಗೊಂಡ ಬಾಲಕರ ಚಿಕಿತ್ಸೆಗೆ ನೆರವು ನೀಡುವ ಕುರಿತು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:ತುಮಕೂರು ಜಿಲ್ಲೆಯ ಕರೀಕೆರೆ ಗ್ರಾಮದ ಶಾಲೆಯಲ್ಲಿ ಧ್ವಜಾರೋಹಣ ಮಾಡಲು ಕಂಬ ನೆಡುವಾಗ ವಿದ್ಯುತ್ ತಂತಿಗೆ ತಾಕಿ ಅವಘಡ ಸಂಭವಿಸಿತ್ತು. ವಿದ್ಯುತ್ ಸ್ಪರ್ಶದಿಂದ ವಿದ್ಯಾರ್ಥಿ ಚಂದನ್ ಸಾವಿಗೀಡಾಗಿದ್ದು, ಪವನ್ ಮತ್ತು ಶಶಾಂಕ್ ಎಂಬ ಇನ್ನಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ತನಿಖೆಗೆ ಆದೇಶಿಸಿದ್ದರು. ಈ ವಿವರಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ನಂತರ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.