ಬೆಂಗಳೂರು: ಸರ್ಕಾರದಿಂದ ಬರಪೀಡಿತ ಪ್ರದೇಶಗಳಲ್ಲಿ ತೆರೆಯಲಾಗಿರುವ ಗೋಶಾಲೆಗಳಿಗೆ ಕಾನೂನು ಪ್ರಾಧಿಕಾರದ ಪ್ರತಿನಿಧಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಾಗಿ ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ. ಮಲ್ಲಿಕಾರ್ಜುನ ಅವರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು.
ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾದ ಪ್ರದೇಶದಲ್ಲಿ ತೆರೆಯಲಾದ ಗೋಶಾಲೆಗಳಲ್ಲಿ ಪ್ರತಿ ಜಾನುವಾರುಗೆ 6 ಕೆ.ಜಿ ಒಣ ಮೇವು, 18 ಕೆ.ಜಿ ಹಸಿರು ಮೇವು ಹಾಗೂ 1 ಕೆ.ಜಿ ಪಶು ಆಹಾರ ಪೂರೈಸಬೇಕು ಎಂದು ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಅಲ್ಲಿ ಜಾನುವಾರುಗಳಿಗೆ ಸರಿಯಾಗಿ ಮೇವು ಒದಗಿಸಲಾಗುತ್ತಿದೆಯೆ? ಗೋಶಾಲೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲಾಗುತ್ತಿದೆಯೇ? ಎಂಬುದರ ಬಗ್ಗೆ ಕಾನೂನು ಪ್ರಾಧಿಕಾರದ ಪ್ರತಿನಿಧಿಗಳು ಪರಿಶೀಲನೆ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಕಳೆದ ವಿಚಾರಣೆ ವೇಳೆ ಬರಪೀಡಿತ ತಾಲೂಕುಗಳಲ್ಲಿ ಗೋಶಾಲೆ ತೆರೆಯುವ ಹಾಗೂ ಜಾನುವಾರುಗಳಿಗೆ ಸಮರ್ಪಕ ಪ್ರಮಾಣದಲ್ಲಿ ಮೇವು ಪೂರೈಸುವ ಸಂಬಂಧ ನ್ಯಾಯಾಲಯದ ಆದೇಶವನ್ನು ಸರಿಯಾಗಿ ರಾಜ್ಯ ಸರ್ಕಾರ ಪಾಲನೆ ಮಾಡಿರಲಿಲ್ಲ. ಇದರ ವಿರುದ್ಧ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿ ಕೈಗೊಂಡ ಕ್ರಮದ ಕುರಿತು ಇಂದು ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿತ್ತು.