ಬೆಂಗಳೂರು:ಮಂಡ್ಯದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದುಕೊಂಡಿರುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎನ್ಎಸ್ಎಲ್ ಶುಗರ್ಸ್ ಸಲ್ಲಿಸಿರುವ ಅರ್ಜಿ ಸಂಬಂಧ ನಿರಾಣಿ ಶುಗರ್ಸ್ ಮಾಲೀಕ ಮುರುಗೇಶ್ ನಿರಾಣಿ ಅವರಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ಸಕ್ಕರೆ ಕಾರ್ಖಾನೆ ಟೆಂಡರ್; ಮುರುಗೇಶ್ ನಿರಾಣಿಗೆ ಹೈಕೋರ್ಟ್ ನೋಟಿಸ್
ಮಂಡ್ಯದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದುಕೊಂಡಿರುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎನ್ಎಸ್ಎಲ್ ಶುಗರ್ಸ್ ಸಲ್ಲಿಸಿರುವ ಅರ್ಜಿ ಸಂಬಂಧ ನಿರಾಣಿ ಶುಗರ್ಸ್ ಮಾಲೀಕ ಮುರುಗೇಶ್ ನಿರಾಣಿ ಅವರಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ಪ್ರಭಾವಿ ಮುಖಂಡ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್, ಕಳೆದ ಜೂನ್ ಮೊದಲ ವಾರದಲ್ಲಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಟೆಂಡರ್ ಮೂಲಕ 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದುಕೊಂಡಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಮತ್ತು ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಆರೋಪಿಸಿರುವ ಎನ್ಎಸ್ಎಲ್ ಶುಗರ್ಸ್, ಟೆಂಡರ್ ಪ್ರಕ್ರಿಯೆಯನ್ನು ಹೊಸದಾಗಿ ನಡೆಸುವಂತೆ ನಿರ್ದೇಶಿಸಲು ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರಿದ್ದ ಏಕಸದಸ್ಯ ಪೀಠ, ನಿರಾಣಿ ಶುಗರ್ಸ್ ಮಾಲೀಕ ಮುರುಗೇಶ್ ನಿರಾಣಿ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ನಿರ್ದೇಶಿಸಿ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ.
ನಿರಾಣಿ ಪ್ರತಿಕ್ರಿಯೆ:ಹೈಕೋರ್ಟ್ ತುರ್ತು ನೋಟಿಸ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುರುಗೇಶ್ ನಿರಾಣಿ, ತಾವು ಗ್ಲೋಬಲ್ ಟೆಂಡರ್ ನಲ್ಲಿ 40 ವರ್ಷಕ್ಕೆ ಪಿಎಸ್ಎಸ್ ಕೆಯನ್ನು ಗುತ್ತಿಗೆಗೆ ಪಡೆದಿದ್ದೇವೆ. ಎನ್ಎಸ್ಎಲ್ ಶುಗರ್ಸ್ ಸಂಸ್ಥೆಯವರು ಆರೋಪಿಸಿರುವಂತೆ ಟೆಂಡರ್ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಹಾಗಿದ್ದೂ ಹೈಕೋರ್ಟ್ನಲ್ಲಿ ದುರುದ್ದೇಶದಿಂದ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ನಲ್ಲಿ ಪ್ರತಿವಾದಿಗಳಿಗೆ ತಕ್ಕ ಉತ್ತರ ನೀಡಿ, ಆದಷ್ಟು ಬೇಗ ಕಾರ್ಖಾನೆ ಆರಂಭಿಸಲಿದ್ದೇವೆ. ಕಬ್ಬು ಬೆಳೆಗಾರರು ಈ ಕುರಿತು ಅನಗತ್ಯ ಅಂತಕಕ್ಕೆ ಒಳಗಾಗುವುದು ಬೇಡ ಎಂದಿದ್ದಾರೆ.