ಬೆಂಗಳೂರು: ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ’ ಟೆಂಡರ್ ರದ್ದುಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನಗರದ ಸಂಚಾರ ದಟ್ಟಣೆ ಮಧ್ಯೆಯೂ ರೋಗಿಗಳು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ಗಳ ಮೂಲಕ ಸುಗಮವಾಗಿ ಸಾಗಿಸಲು ಅನುಕೂಲ ಕಲ್ಪಿಸಲು 1800 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿತ್ತು.
ಆ್ಯಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಭಾರತ್ ಪುನರುತ್ಥಾನ ಟ್ರಸ್ಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರು ಆರೋಗ್ಯ ಸಚಿವರ ಸೂಚನೆ ಮೇರೆಗೆ ಟೆಂಡರ್ ರದ್ದುಪಡಿಸಿರುವುದರಿಂದ ಮೂಲ ಅರ್ಜಿಯಲ್ಲಿ ಸಚಿವರನ್ನೂ ಪ್ರತಿವಾದಿಯಾಗಿ ಸೇರಿಸಬೇಕು ಎಂದು ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಪರಿಗಣಿಸಿದ ಪೀಠ, ಡಾ. ಕೆ. ಸುಧಾಕರ್ ಅವರಿಗೆ ನೋಟಿಸ್ ಜಾರಿ ಮಾಡಿತು.
ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು ವಾದಿಸಿ, ಆಡಳಿತಾತ್ಮಕ ವಿಷಯಗಳಲ್ಲಿ ಮುಖ್ಯ ಕಾರ್ಯದರ್ಶಿ ಸರ್ಕಾರವನ್ನು ಪ್ರತಿನಿಧಿಸುತ್ತಾರೆ. ಅದರಂತೆ ಅರ್ಜಿಯಲ್ಲಿ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿವಾದಿಯಾಗಿಸಿದ್ದು, ಅವರಿಗೆ ನೋಟಿಸ್ ಕೂಡ ಜಾರಿಯಾಗಿದೆ. ಹೀಗಾಗಿ ಸಚಿವರನ್ನು ಪ್ರತಿವಾದಿಯಾಗಿಸುವ ಅಗತ್ಯವಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಚಿವರ ಸೂಚನೆ ಮೇರೆಗೆ ಟೆಂಡರ್ ರದ್ದುಪಡಿಸಲಾಗಿದೆ. ಸಚಿವರನ್ನು ಪ್ರತಿವಾದಿಯನ್ನಾಗಿ ಸೇರಿಸಲು ಅರ್ಜಿದಾರರು ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಮುಂದುವರಿಸಲು ಸಚಿವರ ವಾದವನ್ನೂ ಕೇಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.
ಹಾಗೆಯೇ, ಸಚಿವರ ಪರವಾಗಿ ನೋಟಿಸ್ ಸ್ವೀಕರಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿತು. ಅರ್ಜಿಯ ಹಿಂದಿನ ವಿಚಾರಣೆ ವೇಳೆ, ಟೆಂಡರ್ ರದ್ದುಪಡಿಸಿದ ಸರ್ಕಾರ ಹಾಗೂ ಆರೋಗ್ಯ ಸಚಿವರ ವಿರುದ್ಧ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಕೆಲ ದೋಷಗಳಿದ್ದ ಕಾರಣಕ್ಕೆ ಆರೋಗ್ಯ ಸಚಿವರ ಸೂಚನೆ ಮೇರೆಗೆ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದೀರಿ. ಅದಕ್ಕೂ ಮುನ್ನ ತಜ್ಞರ ಜತೆ ಚರ್ಚಿಸಿ ರದ್ದುಪಡಿಸಲಾಗಿದೆ ಎಂದು ಹೇಳಿದರೂ, ಆ ಬಗ್ಗೆ ಲಿಖಿತ ದಾಖಲೆ ನೀಡಿಲ್ಲ. ಟೆಂಡರ್ ರದ್ದುಪಡಿಸಲು ಸಲಹೆ ನೀಡಿದ ತಜ್ಞರು ಯಾರು? ಅವರ ನೀಡಿದ ಸಲಹೆ ಏನು? ಎಂಬ ಬಗ್ಗೆ ಮಾಹಿತಿ ಇಲ್ಲ. ಟೆಂಡರ್ ಪ್ರಕ್ರಿಯೆ ಮೇಲೆ ಹೈಕೋರ್ಟ್ ನಿಗಾವಹಿಸಿದೆ ಎಂದು ಪೀಠ ಹಲವು ಬಾರಿ ಹೇಳಿತ್ತು.
ಸರ್ಕಾರವೂ ಶೀಘ್ರವಾಗಿ ಟೆಂಡರ್ ಅಂತಿಮಗೊಳಿಸುವ ಭರವಸೆಯೂ ನೀಡಿತ್ತು. ಆದರೆ, ಕೋರ್ಟ್ ಗಮನಕ್ಕೆ ತರದೆ ಸರ್ಕಾರ ಟೆಂಡರ್ ರದ್ದುಪಡಿಸಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ಬಗ್ಗೆ ಆರೋಗ್ಯ ಸಚಿವರಿಗೆ ಮಾಹಿತಿ ಇರಲಿಲ್ಲವೇ? ಎಂದು ಪ್ರಶ್ನಿಸಿದ್ದ ಪೀಠ, ಈ ವಿಚಾರದಲ್ಲಿ ಸೂಕ್ತ ವಿವರಣೆ ನೀಡದೇ ಹೋದರೆ ಆರೋಗ್ಯ ಸಚಿವರನ್ನು ಪ್ರತಿವಾದಿ ಮಾಡಲು ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.