ಬೆಂಗಳೂರು: ಪೋಷಕರು ಮಾಡಿರುವ ತಪ್ಪಿಗೆ ಮಗು ತೊಂದರೆ ಅನುಭವಿಸುವಂತಾಗಬಾರದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಹೆಸರನ್ನು ಸೇರಿಸಿ ವಿತರಣೆ ಮಾಡಲು ನಿರ್ದೇಶನ ನೀಡಿದೆ. ಕಾರಣಾಂತರಗಳಿಂದ ಹೆಸರನ್ನು ಉಲ್ಲೇಖಿಸದ ಹಿನ್ನೆಲೆಯಲ್ಲಿ ಹೆಸರನ್ನು ಉಲ್ಲೇಖಿಸಿ ಜನನ ಪ್ರಮಾಣ ಪತ್ರ ವಿತರಣೆ ಮಾಡುವಂತೆ ಸೂಚನೆ ನೀಡಲು ಕೋರಿ ಬೆಂಗಳೂರಿನಲ್ಲಿ ಜನಿಸಿದ್ದ ಕೇರಳದ ಫಾತೀಮಾ ರಿಚೆಲ್ಲೀ ಮ್ಯಾಥರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಈ ಸೂಚನೆ ನೀಡಿದೆ.
ಅಲ್ಲದೇ, ಅರ್ಜಿದಾರರಿಗೆ ಸರ್ಕಾರದಿಂದ ನೀಡಿರುವ ಆಧಾರ್, ಪಾಸ್‌ಪೋರ್ಟ್, ಸಿಬಿಎಸ್ಸಿ ನೀಡಿರುವ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಪೋಷಕರ ಹೆಸರಿದೆ. ಮಗುವಿನ ಗುರುತು ಮತ್ತು ಪಿತೃತ್ವದಲ್ಲಿ ಯಾವುದೇ ಪ್ರಶ್ನೆ ಉದ್ಭವಿಸಿಲ್ಲ. ಹೀಗಿರುವಾಗಿ ಮಗುವಿನ ಹೆಸರಿನೊಂದಿಗೆ ಜನನ ಪ್ರಮಾಣ ಪತ್ರವನ್ನು ನಿರಾಕರಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಷ್ಟೇ ಅಲ್ಲದೇ, ಜನನ ಪ್ರಮಾಣ ಪತ್ರದ ಕುರಿತ ಗೃಹ ಸಚಿವಾಲಯದ ನಿಯಮಗಳು ಸರ್ಕಾರದ ಪ್ರಾಧಿಕಾರಗಳಿಗೆ ಮಾತ್ರ ಗೊತ್ತಿರಲಿದೆ. ಆದ ಕಾರಣ ಕೇಂದ್ರದ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸುವುದು, ಸರ್ಕಾರದ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ. ಈ ಬಗ್ಗೆ ಅರ್ಜಿದಾರರ ಗಮನಕ್ಕೆ ತಂದಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಹೀಗಾಗಿ ರಾಜ್ಯದ ಹೊರ ಭಾಗದಲ್ಲಿ ನೆಲೆಸಿರುವ ಅರ್ಜಿದಾರರ ಗಮನಕ್ಕೂ ಬಂದಿಲ್ಲ.
15 ವರ್ಷದ ಮಗು ಅಪ್ರಾಪ್ತರಾಗಿರುತ್ತಾರೆ. ಹೀಗಾಗಿ ಪ್ರಾಪ್ತರಾದ ಬಳಿಕ ಹೆಸರನ್ನು ಸೇರ್ಪಡೆ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ. ಈ ರೀತಿಯ ಅಂಶಗಳನ್ನು ಸರ್ಕಾರದ ಪ್ರಾಧಿಕಾರಗಳು ಗಣನೆಗೆ ತೆಗೆದುಕೊಳ್ಳಬೇಕು. ಈ ಅಂಶವನ್ನು ಪರಿಗಣಿಸದೆ ಜನನ ಪ್ರಮಾಣ ಪತ್ರವನ್ನು ಹೆಸರು ಸೇರಿಸಿ ನೀಡದೆ ನಿರಾಕರಿಸಿರುವುದು ಕೆಟ್ಟ ಬೆಳವಣಿಗೆಯಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.