ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಶಾಸಕಿ ಕನೀಝ್‌ ಫಾತಿಮಾಗೆ ಹೈಕೋರ್ಟ್‌ ನೋಟಿಸ್ - etv bharat karnataka

ಚುನಾವಾಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕಿ ಕನೀಝ್‌ ಫಾತಿಮಾ ಅವರಿಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ.

Etv Bharathigh-court-notice-to-congress-mla-kaneez-fathima-over-giving-false-information-to-ec
ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ: ಶಾಸಕಿ ಕನೀಝ್‌ ಫಾತಿಮಾಗೆ ಹೈಕೋರ್ಟ್‌ ನೋಟಿಸ್

By ETV Bharat Karnataka Team

Published : Dec 8, 2023, 9:45 PM IST

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರ ಮತ್ತು ವಿದ್ಯಾರ್ಹತೆ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಕನೀಝ್‌ ಫಾತಿಮಾ ಅವರಿಗೆ ಹೈಕೋರ್ಟ್‌ ನೋಟಿಸ್ ಕೊಟ್ಟಿದೆ.

ಜನತಾದಳ (ಸಂಯುಕ್ತ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಎ.ಎಸ್.ಶರಣಬಸಪ್ಪ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ, ಶಾಸಕಿ ಕನೀಝ್‌ ಫಾತಿಮಾ, ಚಂದ್ರಕಾಂತ್‌, ನಾಸಿರ್ ಹುಸೇನ್‌, ಮೆಹಬೂಬ್‌ ಷಾ, ಸೈಯದ್‌ ಸಜ್ಜದ್‌ ಅಲಿ, ಅಬ್ದುಲ್‌ ಹಾಜಿ ಮೊಹಮದ್‌, ತಾರಾಭಾಯಿ ಭೋವಿ, ಮೊಹಮದ್‌ ಅಶ್ರಫ್‌, ಅಬ್ದುರ್ ರಹೀಂ, ಅಬ್ದುಲ್‌ ಹಮೀದ್‌ ಬಾಗಬಾನ್‌ ಮತ್ತು ಮುಜಾಹಿದ್‌ ರೌಫ್‌ ಮಜ್ಹರಿ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

ವಿಚಾರಣೆ ವೇಳೆ ಕನೀಝ್‌ ಫಾತಿಮಾ ಪರ ಹಾಜರಾಗಿ ವಕಾಲತ್ತು ಸಲ್ಲಿಸಿದ ಹೈಕೋರ್ಟ್‌ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌, ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ವಿವರ:ರಾಜ್ಯ ವಿಧಾನಸಭೆಗೆ 2023ರ ಮೇ 10ರಂದು ನಡೆದ ಚುನಾವಣೆಯಲ್ಲಿ ಕನೀಝ್‌ ಫಾತಿಮಾ ಕಲಬುರಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರು ಚುನಾವಣೆಗೆ ಸ್ಪರ್ಧಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಸ್ಥಿರಾಸ್ತಿ, ಶೇರುಗಳು ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳಲ್ಲಿ ಸತ್ಯಾಂಶದ ವಿವರಗಳನ್ನು ನೀಡಿಲ್ಲ. ಇದು ಜನಪ್ರತಿನಿಧಿಗಳ ಕಾಯ್ದೆಯ ಉಲ್ಲಂಘನೆ. ಆದ್ದರಿಂದ, ಇವರ ಆಯ್ಕೆಯನ್ನು ಅನೂರ್ಜಿತಗೊಳಿಸಿ ಇವರ ಸಮೀಪದ ಪ್ರತಿಸ್ಪರ್ಧಿಯಾಗಿ ಎರಡನೇ ಅತಿಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ಶಾಸಕರನ್ನಾಗಿ ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಹಗರಣ: ರುದ್ರಗೌಡ ಪಾಟೀಲ್ ಮನವಿ ತಿರಸ್ಕರಿಸಿದ ಹೈಕೋರ್ಟ್

ABOUT THE AUTHOR

...view details