ಕರ್ನಾಟಕ

karnataka

ETV Bharat / state

ದೇಶದ್ರೋಹ ಘೋಷಣೆ ಪ್ರಕರಣ: ಹುಬ್ಬಳ್ಳಿ ವಕೀಲರ ನಿರ್ಣಯಕ್ಕೆ ಹೈಕೋರ್ಟ್ ಬೇಸರ - ಹುಬ್ಬಳ್ಳಿ ವಕೀಲರ ನಿರ್ಣಯಕ್ಕೆ ಹೈಕೋರ್ಟ್ ಬೇಸರ

ಆರೋಪಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡ ನಿರ್ಣಯದ ಕಾನೂನು ಬದ್ಧತೆ ಪ್ರಶ್ನಿಸಿ ಬಿ.ಟಿ ವೆಂಕಟೇಶ ಸೇರಿದಂತೆ 24 ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

High Court is angry against the Hubli's lawyer
ಹೈಕೋರ್ಟ್

By

Published : Feb 26, 2020, 5:44 PM IST

ಬೆಂಗಳೂರು: ಕಾಶ್ಮೀರಿ ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣ ಸಂಬಂಧ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿದ್ದ ನಿರ್ಣಯಕ್ಕೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಆರೋಪಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡ ನಿರ್ಣಯದ ಕಾನೂನು ಬದ್ಧತೆ ಪ್ರಶ್ನಿಸಿ ಬಿ.ಟಿ ವೆಂಕಟೇಶ ಸೇರಿದಂತೆ 24 ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.‌ ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿ, ಹುಬ್ಬಳ್ಳಿ ವಕೀಲರ ಸಂಘದ ನಿರ್ಣಯ ಕಾನೂನು ಸಮ್ಮತವಾದುದಲ್ಲ. ಹೀಗಿದ್ದೂ ಆರೋಪಿಗಳ ಪರ ವಕಾಲತ್ತು ಹಾಕಲು ಮುಂದಾದ ವಕೀಲರಿಗೆ ಅರ್ಜಿ ಹಾಕದಂತೆ ಕಿರಿಕಿರಿ ಉಂಟುಮಾಡಲಾಗಿದೆ ಎಂದು ದೂರಿದರು.

ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ, ಆರೋಪಿಗಳಿಗೂ ತಮ್ಮ ಪರ ವಾದ ಮಂಡಿಸುವ ಹಕ್ಕಿದೆ. ಉಗ್ರ ಎಂದು ನಿರ್ಣಯಿಸಲಾದ ಅಜ್ಮಲ್ ಕಸಬ್​ಗೂ ವಿಚಾರಣೆಗೆ ಅವಕಾಶ ನೀಡಲಾಗಿದೆ. ಹಾಗಿದ್ದಾಗ ವಕೀಲರ ಸಂಘ ಇಂತಹ ನಿರ್ಣಯ ಕೈಗೊಂಡಿರುವುದು ಕಾನೂನು ಬಾಹಿರ ಎಂದೇ ಪರಿಗಣಿಸಬೇಕಾಗುತ್ತದೆ. ನಿನ್ನೆ ಆರೋಪಿಗಳ ಪರ ವಕೀಲರಿಗೆ ವಕಾಲತ್ತು ಹಾಕಲು ಅಡ್ಡಿ ಮಾಡಿದ ಘಟನೆ ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಲಿದೆ. ನ್ಯಾಯಾಂಗದ ಘನತೆ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಜಾಮೀನು ಅರ್ಜಿ ಹಾಕಲೂ ವಕೀಲರನ್ನು ಬಿಟ್ಟಿಲ್ಲ ಎಂದರೆ ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details