ಬೆಂಗಳೂರು :ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳೊಂದಿಗೆ ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ(ಎನ್ಐಸಿ) ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಕೇಂದ್ರ ಸರ್ಕಾರ ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಿದೆ ಎಂದು ಆಕ್ಷೇಪಿಸಿ ನಗರದ ಅನಿವರ್ ಅರವಿಂದ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಮೇಲ್ನೋಟಕ್ಕೆ ಸರ್ಕಾರ ಆರೋಗ್ಯ ಸೇತು ಆ್ಯಪ್ ಬಳಕೆದಾರರ ಮಾಹಿತಿಗಳನ್ನು ಹಂಚಿಕೊಳ್ಳಲು ಅವರಿಂದ ಯಾವುದೇ ಒಪ್ಪಿಗೆ ಪಡೆದುಕೊಂಡಂತೆ ಕಾಣುವುದಿಲ್ಲ.
ಹೀಗಾಗಿ ಗೌಪ್ಯತಾ ನೀತಿಯಂತೆ ಆ್ಯಪ್‌ನಿಂದ ಮಾಹಿತಿಯನ್ನು ಸಂಗ್ರಹಿಸಬಹುದಾಗಿದ್ದರೂ ಇಲಾಖೆಗಳ ನಡುವೆ ಹಂಚಿಕೊಳ್ಳುವಂತಿಲ್ಲ ಎಂದು ಅಭಿಪ್ರಾಯಪಟ್ಟು, ಆರೋಗ್ಯ ಸೇತು ಆ್ಯಪ್ ಬಳಕೆದಾರರ ಮಾಹಿತಿಯನ್ನು ಯಾವುದೇ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಾರದು ಎಂದು ಮಧ್ಯಂತರ ಆದೇಶ ಮಾಡಿತು.