ಬೆಂಗಳೂರು:ಹಿಡುವಳಿಗಾಗಿ ನೀಡಿದ್ದ ಜಮೀನನ್ನು ಸ್ವಾಧೀನಕ್ಕೆ ನೀಡುವಂತೆ ಕೋರಿ ಹಲವು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಗೋಪಾಲಕೃಷ್ಣ ಭಟ್ ಅವರ ನೆರವಿಗೆ ಹೈಕೋರ್ಟ್ ಧಾವಿಸಿದೆ. ನಾಲ್ಕು ಎಕರೆ ಜಮೀನಿನ ಸ್ವಾಧೀನವನ್ನು ಎಂಟು ವಾರದಲ್ಲಿ ಸುಪರ್ದಿಗೆ ನೀಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ವಿವಾದಿತ ಜಮೀನಿನ ಮಾಲೀಕತ್ವ ರದ್ದು ಕೋರಿ ನಫಿಜಾ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ, ಅರ್ಜಿದಾರರು ಕೂಡಲೇ ಜಮೀನಿನ ಸ್ವಾಧೀನವನ್ನು ಗೋಪಾಲಕೃಷ್ಣ ಅವರಿಗೆ ಬಿಟ್ಟುಕೊಡಬೇಕು ಎಂದು ಹೇಳಿದರು. ಈ ಆದೇಶವನ್ನು ಅರ್ಜಿದಾರರು ಪಾಲಿಸದಿದ್ದರೆ, ಅವರನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಜಮೀನಿನಿಂದ ಒಕ್ಕಲೆಬ್ಬಿಸಬೇಕು ಎಂದರು. ಜತೆಗೆ ಗೋಪಾಲಕೃಷ್ಣ ಭಟ್ ಅವರಿಗೆ ಜಮೀನಿನ ಸ್ವಾಧೀನ ನೀಡಬೇಕು ಎಂದು ಆದೇಶಿಸಿದೆ.
ತನ್ನ ಕೈ ತಪ್ಪಿದ್ದ ಜಮೀನನ್ನು ಮತ್ತೆ ಪಡೆಯಲು 1990ರಿಂದ ನಿವೃತ್ತ ಲೆ.ಕರ್ನಲ್ ಕಾನೂನು ಹೋರಾಟ ನಡೆಸುತ್ತಿದ್ದರು. ನಮ್ಮ ದೇಶದ ಗಡಿ ರಕ್ಷಿಸಲು ತಮ್ಮ ಪ್ರಾಣ ಪಣಕ್ಕಿಡುವ ಸೈನಿಕರನ್ನು ಸಮಾಜದ ಒಂದು ವಿಭಾಗವು ಎಷ್ಟೊಂದು ಕಳಪೆಯಾಗಿ ನಡೆಸಿಕೊಳ್ಳಬಹುದು ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961ರ 15 (5)ರ ಅನುಸಾರ ಸೈನಿಕರು ನಿವೃತ್ತಿಯಾದ ಮೇಲೆ ತಮ್ಮ ಮಾಲೀಕತ್ವದ ಹಿಡುವಳಿ ಜಮೀನನ್ನು ಪುನಃ ಪಡೆಯಬಹುದು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.