ಬೆಂಗಳೂರು: ಆರೋಗ್ಯ ಸೇತು ಆ್ಯಪ್ ಸುರಕ್ಷಿತವಲ್ಲ ಹಾಗೂ ಬಳಕೆದಾರರ ಖಾಸಗಿ ಮಾಹಿತಿಗೆ ರಕ್ಷಣೆಯಿಲ್ಲ ಎಂದು ಆರೋಪಿಸಿರುವ ಅರ್ಜಿದಾರರಿಗೆ ಈ ಕುರಿತು ನಿಖರ ತಾಂತ್ರಿಕ ವಿವರಣೆ ನೀಡಲು ಹೈಕೋರ್ಟ್ ಹತ್ತು ದಿನಗಳ ಕಾಲಾವಕಾಶ ನೀಡಿದೆ.
ಆರೋಗ್ಯ ಸೇತು ಆ್ಯಪ್ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ನಗರದ ಅನಿವರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರಾದ ಕೊಲಿನ್ ಗೋನ್ಸಾಲ್ವೇಸ್ ವಾದಿಸಿ, ಆರೋಗ್ಯ ಸೇತು ಆ್ಯಪ್ ಸುರಕ್ಷಿತವಲ್ಲ. ಆ್ಯಪ್ ಬಳಕೆದಾರರ ಮಾಹಿತಿಯನ್ನು ಸರ್ಕಾರದ ಪ್ರಾಧಿಕಾರಗಳಿಗೆ ರವಾನಿಸಲಾಗುತ್ತದೆ. ಹೀಗಾಗಿ ಬಳಕೆದಾರರ ಖಾಸಗಿತನದ ಹಕ್ಕು ಉಲ್ಲಂಘನೆಯಾಗುತ್ತಿದೆ. ಆ್ಯಪ್ ಬಳಕೆ ಮಾಡಲು ಆರಂಭಿಸುತ್ತಿದ್ದಂತೆಯೇ ಅದು ಬಳಕೆದಾರರ ಎಲ್ಲಾ ಆರೋಗ್ಯ ಮಾಹಿತಿ ಕೇಳುತ್ತದೆ. ಅವುಗಳನ್ನು ದಾಖಲಿಸಿ ಬಳಕೆ ಮಾಡಲು ಪ್ರಾರಂಭಿಸುತ್ತಿದ್ದಂತೆ ಮೊಬೈಲ್ ಬ್ಲೂಟೂತ್ ತೆರೆದುಕೊಳ್ಳುತ್ತದೆ. ಜತೆಗೆ ಈ ಮಾಹಿತಿಯನ್ನು ಸರ್ಕಾರಿ ಪ್ರಾಧಿಕಾರಗಳಿಗೆ ರವಾನಿಸುತ್ತದೆ. ಆ್ಯಪ್ ಖಾಸಗಿತನದ ದೃಷ್ಟಿಯಿಂದ ಸುರಕ್ಷಿತವಲ್ಲ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿ, ಆರೋಗ್ಯ ಸೇತು ಆ್ಯಪ್ಅನ್ನು ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಜಾರಿ ಮಾಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಬಳಿ ರೋಗಿ ಮಾಹಿತಿ ನೀಡಿದಂತೆಯೇ ಆ್ಯಪ್ ಕೂಡ ಮಾಹಿತಿಗಳನ್ನು ಕೇಳುತ್ತದೆ ಅಷ್ಟೇ. ಮಾಹಿತಿ ಸರ್ಕಾರದ ಬಳಿ ಇರುತ್ತದೆಯೇ ಹೊರತು ಖಾಸಗಿಯವರಿಗೆ ಲಭ್ಯವಾಗುವುದಿಲ್ಲ. ಆ್ಯಪ್ ಸುರಕ್ಷಿತ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆರೋಗ್ಯ ಸೇತು ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ. ಯಾವೆಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಸರ್ಕಾರಿ ಪ್ರಾಧಿಕಾರಗಳಿಗೆ ಹೇಗೆ ಮಾಹಿತಿ ರವಾನಿಸುತ್ತದೆ. ಬಳಕೆದಾರನ ಆರೋಗ್ಯ ಮಾಹಿತಿಗೆ ಸಂಬಂಧಿಸಿದಂತೆ ಆ್ಯಪ್ ಗ್ರೀನ್, ಆರೆಂಜ್, ಯೆಲ್ಲೋ ಹಾಗೂ ರೆಡ್ ಸಿಗ್ನಲ್ಗಳನ್ನು ಹೇಗೆ ನೀಡುತ್ತದೆ ಎಂಬ ತಾಂತ್ರಿತ ವಿವರಗಳನ್ನು ಒದಗಿಸಲು ಅರ್ಜಿದಾರರಿಗೆ 10 ದಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ನ. 26ಕ್ಕೆ ಮುಂದೂಡಿತು.