ಬೆಂಗಳೂರು :ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ರೂಪಿಸಿರುವ 'ಆರೋಗ್ಯ ಸೇತು' ಮೊಬೈಲ್ ಆ್ಯಪ್ ಬಳಕೆಯನ್ನು ಕೇಂದ್ರ ಸರ್ಕಾರದ ಕಚೇರಿಗಳ ನೌಕರರು ಮತ್ತು ಸಂದರ್ಶಕರಿಗೆ ಕಡ್ಡಾಯಗೊಳಿಸಿ, ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಸೂಚನೆ ಹೊರಡಿಸಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆರೋಪಿಸಿ ನಗರದ ಅನಿವರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಆ್ಯಪ್ ಬಳಕೆ ಕಡ್ಡಾಯವಲ್ಲ ಎಂದು ಹೇಳುತ್ತಲೇ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತನ್ನ ಸಿಬ್ಬಂದಿ ಮತ್ತು ಸಂದರ್ಶಕರಿಗೆ ಆ್ಯಪ್ ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಇದನ್ನೇ ಇತರೆ ಇಲಾಖೆಗಳೂ ಅನುಸರಿಸುತ್ತಿವೆ. ಇದರಿಂದಾಗಿ ದೇಶದ ನಾಗರಿಕರ ಆರೋಗ್ಯ ದತ್ತಾಂಶ (ಹೆಲ್ತ್ ಡೇಟಾ) ಮೂರನೇ ವ್ಯಕ್ತಿಗಳಿಗೆ ವ್ಯಾಪಕವಾಗಿ ರವಾನೆಯಾಗುತ್ತಿದೆ. ಇದು ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಕೇರಳ, ದೆಹಲಿ ಸೇರಿ ದೇಶದ ಹಲವು ಹೈಕೋರ್ಟ್‍ಗಳಲ್ಲಿ ಇಂತಹ ಅರ್ಜಿಗಳು ದಾಖಲಾಗಿವೆ. ಅಲ್ಲಿನ ಮಾಹಿತಿ ಪಡೆದುಕೊಂಡು ಸ್ಪಷ್ಟನೆ ನೀಡಲು ಮೂರು ವಾರಗಳ ಕಾಲಾವಕಾಶ ಬೇಕು ಎಂದು ಕೋರಿದರು. ಕಾಲಾವಕಾಶ ನೀಡಿದ ಪೀಠ ವಿಚಾರಣೆಯನ್ನು ಅಗಸ್ಟ್ 14ಕ್ಕೆ ಮುಂದೂಡಿತು.
ಬಿಎಂಆರ್‌ಸಿಎಲ್‍ಗೆ ನೋಟಿಸ್ :ಅರ್ಜಿ ವಿಚಾರಣೆ ವೇಳೆ ಮೆಟ್ರೋ ತನ್ನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸಿ ಬಿಎಂಆರ್ಸಿಎಲ್ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಮೂರು ತಿಂಗಳಿಂದ ಮೆಟ್ರೋ ಸೇವೆ ಸ್ಥಗಿತಗೊಂಡಿದೆ. ಇನ್ನೂ ಮೂರ್ನಾಲ್ಕು ತಿಂಗಳು ಸೇವೆ ಆರಂಭವಾಗುವ ಲಕ್ಷಣಗಳೂ ಇಲ್ಲ. ಈ ವಿಷಯ ಸದ್ಯಕ್ಕೆ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟ ಪೀಠ, ಬಿಎಂಆರ್ಸಿಎಲ್ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿತು.