ಬೆಂಗಳೂರು:ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗೆ ನಾಮನಿರ್ದೇಶನಗೊಂಡಿದ್ದ ಇಬ್ಬರು ಉಪಾಧಿವಂತರು ಹಾಗೂ ಇಬ್ಬರು ವಿದ್ವಾಂಸರನ್ನು ಬದಲಾಯಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
2023ರ ಜುಲೈ 12ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ, ಹೊಸನಗರದ ರಾಮಚಂದ್ರಾಪುರ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ಹೆಗಡೆ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿ ದಾರರ ಪರ ವಕೀಲರು, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಡಿ-ನೋಟಿಫೈ ಪ್ರಕರಣದ ಸಿವಿಲ್ ದಾವೆ ಸಂಬಂಧ 2021ರ ಏ.19ರಂದು ಸುಪ್ರಿಂ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ಪರಿಗಣಿಸಿ ರಾಜ್ಯ ಸರ್ಕಾರವು 2021ರ ಮೇ 4ರಂದು ದೇವಸ್ಥಾನದ ಆಡಳಿತ ನಿರ್ವಹಣೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಎನ್ ಕೃಷ್ಣ ಅವರ ನೇತೃತ್ವದಲ್ಲಿ 8 ಸದಸ್ಯರ ಮೇಲ್ವಿಚಾರಣಾ ಸಮಿತಿ ರಚಿಸಿದೆ ಎಂದು ವಾದಿಸಿದ್ದರು.
ಅಲ್ಲದೆ, ಈ ಸಮಿತಿಯಲ್ಲಿದ್ದ ಉಪಾಧಿವಂತರಾದ ಮಹಾಬಲ ಉಪಾಧ್ಯೆ, ದತ್ತಾತ್ರೇಯ ಹಿರೇಗಂಗೆ ಮತ್ತು ವಿದ್ವಾಂಸರಾದ ಪರಮೇಶ್ವರ ಮಾರ್ಕಾಂಡೆ ಹಾಗೂ ಮುರಳೀಧರ ಪ್ರಭು ಅವರನ್ನು ಕೈಬಿಡಲು 2023ರ ಜುಲೈ 12ರಂದು ರಾಜ್ಯ ಸರ್ಕಾರವು ಆದೇಶಿಸಿತ್ತು. ಜೊತೆಗೆ, ಉಪಾಧಿವಂತರ ಸ್ಥಾನಕ್ಕೆ ಗಣಪತಿ ಶಿವರಾಮ ಹಿರೇಭಟ್ಟ, ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ವಿದ್ವಾಂಸರ ಸ್ಥಾನಕ್ಕೆ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಹಾಗೂ ಮಹೇಶ್ ಗಣೇಶ್ ಹಿರೇಗಂಗೆ ಅವರನ್ನು ನಾಮ ನಿರ್ದೇಶನ ಮಾಡಿತ್ತು.
ಈ ಆದೇಶ ಪ್ರಶ್ನಿಸಿರುವ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚಿಸಿ ಮೇಲ್ವಿಚಾರಣಾ ಸಮಿತಿಗೆ ಇಬ್ಬರು ವಿದ್ವಾಂಸ ಮತ್ತು ಇಬ್ಬರು ಉಪಾಧಿವಂತರನ್ನು ನಾಮ ನಿರ್ದೇಶನ ಮಾಡಲು ಸರ್ಕಾರಕ್ಕೆ ಸೂಚಿಸಲಾಗಿತ್ತು. ಅದರಂತೆ 2021ರ ಮೇ 4ರಂದು ಸಮಿತಿ ರಚಿಸಲಾಗಿತ್ತು ಎಂದು ವಿವರಿಸಿದ್ದರು.
ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ:ಸಿವಿಲ್ ಮೇಲ್ಮನವಿ ವಿಲೇವಾರಿಗೆ ಬಾಕಿಯಿರುವಾಗ ಮತ್ತು ಸಮಿತಿಯ ಯಾವುದೇ ಸದಸ್ಯ ಅನರ್ಹ ಅಥವಾ ನಿಷ್ಕ್ರಿಯಗೊಳ್ಳದೇ ಇರುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಜು.12ರಂದು ಆದೇಶ ಹೊರಡಿಸಿ, ಹಳೆಯ ಸಮಿತಿಯಲ್ಲಿದ್ದ ನಾಲ್ವರು ಸದಸ್ಯರನ್ನು ಕೈಬಿಟ್ಟು ಹೊಸ ಸದಸ್ಯರನ್ನು ನಾಮ ನಿರ್ದೇಶನ ಮಾಡಿದೆ. ಸುಪ್ರಿಂ ಕೋರ್ಟ್ ಆದೇಶದ ಪೂರ್ವಾನುಮತಿ ಇಲ್ಲದೇ ಸಮಿತಿಯ ಸದಸ್ಯರನ್ನು ಬದಲಿಸಲು ಯಾವುದೇ ಅಧಿಕಾರ ಸರ್ಕಾರಕ್ಕೆ ಇಲ್ಲವಾಗಿದೆ. ಆದ್ದರಿಂದ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಅಂಶಗಳನ್ನು ದಾಖಲಿಸಿಕೊಂಡಿದ್ದ ನ್ಯಾಯಪೀಠ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಇದನ್ನೂ ಓದಿ:ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿಚಾರ: ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಮುಂದಾದ ಮಂಡ್ಯ ರೈತರು... ತಡೆದ ಪೊಲೀಸರು!