ಬೆಂಗಳೂರು: ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ತಂದೆಯಾದವರು ಮಗುವನ್ನು ಭೇಟಿ ಮಾಡಲು ಮುಂದಾಗಿರಲಿಲ್ಲ. ಅಷ್ಟೇ ಏಕೆ ಈ ಸಂಬಂಧ ದಾಖಲಾದ ಪ್ರಕರಣದ ವಿಚಾರವಾಗಿ ಕೋರ್ಟ್ಗೂ ಹಾಜರಾಗದ ಕಾರಣ ಮಗುವಿನೊಂದಿಗೆ ತಾಯಿ ಆಸ್ಟ್ರೇಲಿಯಾದಲ್ಲಿ ನೆಲೆಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ. ವಿಚ್ಛೇದನದ ಬಳಿಕ ಎರಡನೇ ವಿವಾಹವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ತಾನು ಮತ್ತು ತನ್ನ ಮಗುವಿಗೆ ಅಲ್ಲಿಯೇ ನೆಲೆಸಲು ಶಾಶ್ವತ ವಿಸಾ ಪಡೆಯಲು ಅನಮತಿಸುವಂತೆ ಕೋರಿ ರಶ್ಮಿಕಾ ಸಲ್ಲಿಸಿದ್ದ ಅರ್ಜಿಯನ್ನು ಮದ್ದೂರಿನ ಸಿವಿಲ್ ನ್ಯಾಯಾಲಯ ವಜಾಗೊಳಿಸಿತ್ತು.
ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಮಗುವಿನೊಂದಿಗೆ ತಾಯಿ ಆಸ್ಟ್ರೇಲಿಯಾದಲ್ಲಿ ನೆಲೆಸುವುದಕ್ಕಾಗಿ ಅವಕಾಶ ಕಲ್ಪಿಸಿದೆ. ಅಲ್ಲದೇ, ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ತಂದೆ ಮಗುವನ್ನು ನೋಡಲು ಆಗಮಿಸಿಲ್ಲ. ಮಗುವನ್ನು ಆಸ್ಟ್ರೇಲಿಯಾ ವೀಸಾ ಪಡೆಯುವ ಸಂಬಂಧ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೂ ಹಾಜರಾಗಿಲ್ಲ. ಈ ಅಂಶ ಗಮನಿಸಿದರೆ, ಪತಿ ಮುಂದಿನ ದಿನಗಳಲ್ಲಿ ಮಗುವನ್ನು ನೋಡುವ ಕುರಿತು ಆಸಕ್ತಿ ಕಳೆದು ಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ.
ಜೊತೆಗೆ, ಪತಿ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಪರಿಣಾಮ ಮತ್ತಷ್ಟು ದಾವೆಗಳು ದಾಖಲಿಸುವುದನ್ನು ತಪ್ಪಿಸುವುದಕ್ಕಾಗಿ ಅರ್ಜಿಯನ್ನು ಪುರಸ್ಕರಿಸಲಾಗುತ್ತಿದೆ ಎಂದು ತಿಳಿಸಿರುವ ನ್ಯಾಯಪೀಠ, ಮಗುವನ್ನು ಆಸ್ಟ್ರೇಲಿಯಾ ವೀಸಾ ಪಡೆಯಲು ಅನುಮತಿ ನೀಡಬಹುದು ಎಂದು ಅಭಿಪ್ರಾಯ ಪಟ್ಟಿದೆ. ಅಷ್ಟೇ ಅಲ್ಲದೇ, ಮಗುವನ್ನು ವಿದೇಶಕ್ಕೆ ಕರೆದೊಯ್ಯಲು ಅನುಮತಿಸಲು ಮತ್ತೊಂದು ಅರ್ಜಿ ಸಲ್ಲಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಮದ್ದೂರಿನ ರಶ್ಮಿಕಾ ಮತ್ತು ಕುಣಿಗಲ್ನ ಕಿಶೋರ್(ಎಲ್ಲರ ಹೆಸರುಗಳನ್ನು ಬದಲಾಯಿಸಲಾಗಿದೆ) 2006ರಲ್ಲಿ ವಿವಾಹವಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಕೆಲ ದಿನಗಳ ಬಳಿಕ ಇಬ್ಬರ ನಡುವಿನ ವಿವಾದದಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಪ್ರಾಪ್ತ ವಯಸ್ಸಿನ ಮಗನನ್ನು ತಾಯಿಯ ಆರೈಕೆಯಲ್ಲಿರಲು ಅವಕಾಶ ನೀಡಿತ್ತು. ಜತೆಗೆ, ತಿಂಗಳಿಗೆ ಒಮ್ಮೆ ಮಗುವನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡಿ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ವಿಚ್ಛೇದನದ ಬಳಿಕ ಪತಿ ಒಮ್ಮೆಯೂ ಮಗನನ್ನು ಭೇಟಿ ಮಾಡಲು ಆಗಮಿಸಿರಲಿಲ್ಲ.