ಬೆಂಗಳೂರು:ನಗರದ ಎಲೆಕ್ಟ್ರಾನಿಕ್ ಸಿಟಿ ನೈಸ್ ರಸ್ತೆಯ ಟೋಲ್ ಪ್ಲಾಜಾ ಬಳಿ ಭಿಕ್ಷೆ ಬೇಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳಮುಖಿಯೊಬ್ಬರನ್ನು ಕೊಲೆ ಮಾಡಿದ ಆರೋಪದಡಿ ಜೈಲು ಸೇರಿದ್ದ ಇಬ್ಬರು ಮಂಗಳಮುಖಿಯರಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ನಿತ್ಯಾ ಅಲಿಯಾಸ್ ರಾಮಕೃಷ್ಣ, ದೇವಿ ಅಲಿಯಾಸ್ ಅಶೋಕ್ ಕುಮಾರ್ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿ ಪುರಸ್ಕರಿಸಿರುವ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಆರೋಪಿತ ಮಂಗಳಮುಖಿಯರೇ ಮೃತ ಮಂಗಳಮುಖಿಯನ್ನು ಕೊಲೆ ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆರೋಪಿಗಳು ಮೃತ ದೇಹವನ್ನು ಅಂತ್ಯಸಂಸ್ಕಾರಕ್ಕೆ ಸ್ವಗ್ರಾಮಕ್ಕೆ ಕೊಂಡೊಯ್ದಿದ್ದರು ಹಾಗೂ ಮನೆಯಲ್ಲಿ ದೊಣ್ಣೆ ಸಿಕ್ಕಿದೆ ಎಂಬ ಅಂಶಗಳನ್ನು ಪರಿಗಣಿಸಿ ಕೊಲೆ ನಡೆದಿದೆ ಎಂದು ಅನುಮಾನಪಟ್ಟು ಬಂಧಿಸಲಾಗಿದೆ. ಆ ಸಾಕ್ಷ್ಯಗಳನ್ನು ಈ ಹಂತದಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿದೆ.
ಓದಿ:ಆಟೋದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ಪ್ರಕರಣದ ಹಿನ್ನೆಲೆ:2020ರ ಆಗಸ್ಟ್ 14ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆ ಟೋಲ್ ಪ್ಲಾಜಾ ಬಳಿ ಭಿಕ್ಷೆ ಬೇಡುತ್ತಿದ್ದ ಮೃತ ಮಂಗಳಮುಖಿಯನ್ನು ಆರೋಪಿಗಳಿಬ್ಬರು ಕ್ಯಾಬ್ಗೆ ಹತ್ತಿಸಿಕೊಂಡು ಹೋಗಿದ್ದರು. ಮರುದಿನ ಬೆಳಗ್ಗೆ ಮಂಗಳಮುಖಿಯ ಮೃತದೇಹವನ್ನು ಅವರದ್ದೇ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿ ಲಾರಿ ಚಾಲಕರು ಕೊಂದರೆಂದು ತಿಳಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಘಟನೆ ಬಳಿಕ ಪೊಲೀಸರು ಅನುಮಾನಗೊಂಡು ಆರೋಪಿಗಳನ್ನು ಬಂಧಿಸಿದ್ದರು. ಹಾಗೆಯೇ ಕೊಲೆ ಹಿಂದಿನ ರಾತ್ರಿ ಇವರನ್ನು ಡ್ರಾಪ್ ಮಾಡಿದ್ದ ಕ್ಯಾಬ್ ಚಾಲಕನನ್ನು ವಿಚಾರಣೆ ನಡೆಸಿದಾಗ ಆತ ಮೂವರನ್ನೂ ಕರೆದೊಯ್ದಿದ್ದನ್ನು ತಿಳಿಸಿದ್ದ. ಪೊಲೀಸರ ತನಿಖೆ ವೇಳೆ ಆರೋಪಿಗಳು ತಮ್ಮ ಆದಾಯ ಕಡಿಮೆಯಾಗುತ್ತದೆ ಎಂಬ ಕಾರಣಕ್ಕಾಗಿ ಮಂಗಳಮುಖಿಯನ್ನು ಕೊಲೆ ಮಾಡಿದ್ದಾರೆ. ಕ್ಯಾಬ್ನಲ್ಲಿ ಮನೆಗೆ ಕರೆದೊಯ್ದು, ದೊಣ್ಣೆಯಿಂದ ಹಲ್ಲೆ ಮಾಡಿ ಕೊಂದು, ನಂತರ ಲಾರಿ ಚಾಲಕರು ಕೊಂದರೆಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದರು.