ಬೆಂಗಳೂರು: ಸಾರ್ವಜನಿಕರಿಗೆ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುವ ಕರ್ತವ್ಯದಲ್ಲಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ಗೆ ನಿಂದಿಸಿದ ಆರೋಪದಡಿ ಬಂಧನ ಭೀತಿ ಎದುರಿಸುತ್ತಿರುವ ಮಂಡ್ಯ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವಿಜಯ್ ಕುಮಾರ್ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಷರತ್ತುಗಳನ್ನು ವಿಧಿಸಿ, ನಿರೀಕ್ಷಣಾ ಜಾಮೀನು ನೀಡಿದೆ. 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು, ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರಬಾರದು, ತನಿಖೆಗೆ ಸಹಕರಿಸಬೇಕು, ತಿಂಗಳಿಗೊಮ್ಮೆ ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕಬೇಕು. ದೋಷಾರೋಪ ಪಟ್ಟಿ ಸಲ್ಲಿಸುವವರೆಗೂ ಅನುಮತಿ ಇಲ್ಲದೆ ಠಾಣೆ ಸರಹದ್ದು ಬಿಟ್ಟು ಹೊರ ಹೋಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.