ಬೆಂಗಳೂರು:ಕೋವಿಡ್ ಎರಡನೇ ಅಲೆ ಉಲ್ಬಣಿಸುತ್ತಿರುವ ಹಿನ್ನೆಲೆ ಹೈಕೋರ್ಟ್ ಪೀಠಗಳು ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳು ಹಾಗೂ ನ್ಯಾಯಾಧಿಕರಣಗಳು ನೀಡಿರುವ ಮಧ್ಯಂತರ ಆದೇಶಗಳನ್ನು ಜುಲೈ 5ರ ವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ.
ಕೊರೊನಾ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಕೊರೊನಾದಿಂದಾಗಿ ನ್ಯಾಯಾಲಯಗಳು ಸೀಮಿತ ಕಲಾಪ ನಡೆಸುತ್ತಿರುವ ಹಿನ್ನೆಲೆ ಕಕ್ಷಿದಾರರ ಅನುಕೂಲಕ್ಕಾಗಿ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠಗಳು, ಎಲ್ಲ ಜಿಲ್ಲಾ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ ಹಾಗೂ ಕೈಗಾರಿಕಾ ನ್ಯಾಯಾಧಿಕರಣಗಳು ನೀಡಿರುವ ಮಧ್ಯಂತರ ಆದೇಶಗಳನ್ನು ಮೇ 29ರ ವರೆಗೆ ವಿಸ್ತರಿಸಲಾಗುತ್ತಿದೆ ಎಂದು ಹೈಕೋರ್ಟ್ ಏ.22ರಂದು ಆದೇಶಿಸಿತ್ತು. ಪರಿಸ್ಥಿತಿ ಹಾಗೆಯೇ ಮುಂದುವರೆದಿರುವ ಹಿನ್ನೆಲೆ ಜುಲೈ 5ರ ವರೆಗೆ ಮಧ್ಯಂತರ ಆದೇಶಗಳನ್ನು ವಿಸ್ತರಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದ ಆದೇಶದಿಂದಾಗಿ, ತೆರವು ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಎಲ್ಲ ನ್ಯಾಯಾಲಯಗಳು ನೀಡಿರುವ ಆದೇಶಗಳೂ ಜುಲೈ 5ರವರೆಗೆ ಅಮಾನತಿನಲ್ಲಿರಲಿವೆ.