ಬೆಂಗಳೂರು:ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಂಧ್ರಪ್ರದೇಶದ ನೆಲ್ಲೂರು ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಿ, ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ. ತನ್ನ ಪತ್ನಿಯನ್ನು ನೆಲ್ಲೂರಿನಲ್ಲಿ ಪೋಷಕರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ತಂಗವೇಲ್ ಎಂಬುವರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ನಿರ್ದೇಶನದಂತೆ ತಂಗವೇಲ್ ಪತ್ನಿ ಎನ್ನಲಾಗುತ್ತಿದ್ದ ಯುವತಿಯನ್ನು ಆಂಧ್ರಪ್ರದೇಶ ಪೊಲೀಸರು ನೆಲ್ಲೂರು ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ನೆಲ್ಲೂರು ಕೋರ್ಟ್ ಮತ್ತು ಹೈಕೋರ್ಟ್‌ಅನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂಪರ್ಕ ಕಲ್ಪಿಸಲಾಗಿತ್ತು. ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸಿದಾಗ ಮಹಿಳೆಯು ತಂಗವೇಲ್ ಅನ್ನು ಮದುವೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದನ್ನು, ಪರಿಗಣಿಸಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ವಿಚಾರಣೆ ವೇಳೆ ನೆಲ್ಲೂರಿನ ನ್ಯಾಯಾಲಯದಿಂದ ಮಹಿಳೆಯೊಂದಿಗಿನ ಸಮಾಲೋಚಿಸಿದ ಹೈಕೋರ್ಟ್ ನಾಲ್ಕು ಪ್ರಶ್ನೆ ಕೇಳಿತು. ನೀವು ಅರ್ಜಿದಾರರನ್ನು ಮದುವೆಯಾಗಿದ್ದಿರಾ? ಮದುವೆಯ ಪ್ರಸ್ತಾಪವಿದೆಯೇ? ನೀವು ಎಲ್ಲಿ ವಾಸಿಸುತ್ತಿದ್ದೀರಾ? ಪೋಷಕರಿಂದ ಏನಾದರೂ ಬೆದರಿಕೆ ಅಥವಾ ದಬ್ಬಾಳಿಕೆ ಇದೆಯೇ? ಎಂಬ ಪ್ರಶ್ನೆಗಳನ್ನು ಕೋರ್ಟ್ ಕೇಳಿತು. ಇದಕ್ಕೆ ಉತ್ತರಿಸಿದ ಯುವತಿ, ನನಗೆ ಮದುವೆಯಾಗಿಲ್ಲ, ಮದುವೆ ಪ್ರಸ್ತಾಪವೂ ಇಲ್ಲ. ಪೋಷಕರೊಂದಿಗೆ ವಾಸಿಸುತ್ತಿದ್ದು, ಯಾವುದೇ ದಬ್ಬಾಳಿಕೆ ಅಥವಾ ಬೆದರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯುವತಿಯ ಉತ್ತರದ ಬಳಿಕ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇ ಗೌಡ ಅವರಿದ್ದ ವಿಭಾಗೀಯ ಪೀಠ, ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವ ಮೂಲಕ ಆಂಧ್ರಪ್ರದೇಶದ ನೆಲ್ಲೂರು ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಜಿ. ದೇವಿಕಾ ಅವರು ಪ್ರಕರಣ ಇತ್ಯರ್ಥಡಿಸಲು ಶ್ರಮಿಸಿದ್ದಾರೆ ಎಂದು ಹೈಕೋರ್ಟ್ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿತು.
ಪ್ರಕರಣದ ಹಿನ್ನೆಲೆ ಏನು?ಬೆಂಗಳೂರಿನ ಬೊಮ್ಮನಹಳ್ಳಿಯ ಗುಲ್ಬರ್ಗಾ ಕಾಲೋನಿಯ ನಿವಾಸಿ ದಿನೇಶ್ ತಂಗವೇಲ್ ಎಂಬಾತ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸರಸ್ವತಿ ನಗರದ ಯುವತಿಯನ್ನು ಮದುವೆಯಾಗಿದ್ದೇನೆ. ಸದ್ಯ ಯುವತಿಯನ್ನು ಪೋಷಕರು ನೆಲ್ಲೂರಿನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ. ಆದ್ದರಿಂದ ಯುವತಿಯನ್ನು ಹೈಕೋರ್ಟ್ ಮುಂದೆ ಹಾಜರುಪಡಿಸಲು ರಾಜ್ಯದ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಆ ಮನವಿ ಪರಿಗಣಿಸಿದ್ದ ಹೈಕೋರ್ಟ್, ಯುವತಿಯನ್ನು ನೆಲ್ಲೂರು ಕೋರ್ಟ್‌ಗೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ನೆಲ್ಲೂರಿನ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮುಂದೆ ಯುವತಿಯನ್ನು ಆಂಧ್ರಪ್ರದೇಶದ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಹೈಕೋರ್ಟ್ ಮತ್ತು ನೆಲ್ಲೂರು ಕೋರ್ಟ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಕಲ್ಪಿಸಲಾಗಿತ್ತು. ಈ ವೇಳೆ ನೆಲ್ಲೂರು ಸಿವಿಲ್ ನ್ಯಾಯಾಯಾಧೀರಾದ ಡಿ.ದೇವಿಕಾ ಅವರು ಸಹ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ತಮ್ಮ ನ್ಯಾಯಾಲಯದ ಮುಂದೆ ಯುವತಿ ಹಾಜರಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಯಸ್ಸಾದ ಪೋಷಕರ ರಕ್ಷಣೆ ಮಕ್ಕಳ ಜವಾಬ್ದಾರಿ: ಹೈಕೋರ್ಟ್ ಆದೇಶ