ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಯುವತಿ ದಾಖಲಿಸಿರುವ ಪ್ರಮಾಣಿತ ಹೇಳಿಕೆ ರದ್ದುಪಡಿಸುವಂತೆ ಕೋರಿ ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಸಿಆರ್ ಪಿಸಿ ಸೆಕ್ಷನ್ 164ರ ಅಡಿ ತಮ್ಮ ಮಗಳು ದಾಖಲಿಸಿರುವ ಹೇಳಿಕೆ ರದ್ದುಪಡಿಸುವಂತೆ ಕೋರಿ ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಯುವತಿಯ ಪರ ವಕೀಲ ಸಂಕೇತ್ ಏಣಗಿ ವಾದಿಸಿ, ಮ್ಯಾಜಿಸ್ಟ್ರೇಟ್ ಎದುರು ಸಿಆರ್ಪಿಸಿ ಸೆಕ್ಷನ್ 164ರ ಅಡಿ ಸಂತ್ರಸ್ತೆ ನೀಡಿರುವ ಹೇಳಿಕೆ ಕಾನೂನು ಬದ್ಧವಾಗಿದೆ. ಯುವತಿಯ ಸ್ವಪ್ರೇರಣೆಯಿಂದ ಹೇಳಿಕೆ ನೀಡಿದ್ದಾರೆ. ಯಾರದೇ ಒತ್ತಾಯ, ಬಲವಂತ ಅಥವಾ ಪ್ರಭಾವಕ್ಕೆ ಮಣಿದು ಹೇಳಿಕೆ ನೀಡಿಲ್ಲ ಎಂದು ವಿವರಿಸಿದರು.
ಎಸ್ಐಟಿ ಪರ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ, ಮ್ಯಾಜಿಸ್ಟ್ರೆಟ್ ಎದುರು ಪ್ರಮಾಣೀಕೃತ ಹೇಳಿಕೆ ದಾಖಲಿಸುವಾಗ ತನ್ನ ಮೇಲೆ ಯಾರಿಂದಲೂ, ಯಾವುದೇ ರೀತಿಯ ಒತ್ತಡ ಇರಲಿಲ್ಲ ಎಂದು ಯುವತಿಯೇ ಸ್ಪಷ್ಟಪಡಿಸಿದ್ದಾಳೆ.
ಇದಕ್ಕೂ ಮೊದಲು ಪೋಷಕರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆಯೂ, ಸ್ವಇಚ್ಛೆಯಿಂದಲೇ ಪಾಲಕರಿಂದ ದೂರ ಇದ್ದೇನೆ ಎಂದು ತಿಳಿಸಿದ್ದಾಳೆ. ಹೀಗಾಗಿ, ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿರುವ ಹೇಳಿಕೆ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿಲ್ಲ. ಹೇಳಿಕೆಯ ಸತ್ಯಾಸತ್ಯೆ ನ್ಯಾಯಾಲಯದ ವಿಚಾರಣೆಯಲ್ಲಿ ತಿಳಿಯಬೇಕಿದೆ.