ಕರ್ನಾಟಕ

karnataka

ETV Bharat / state

ನೌಕರರಿಗೆ ಕೋವಿಡ್ ಲಸಿಕೆ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - ಹೈಕೋರ್ಟ್

ಅರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿದ ಪೀಠ, ಸ್ವತಃ ನೀವೇ ಲಸಿಕೆ ಪಡೆದಿದ್ದೂ ಲಸಿಕೆ ವಿರುದ್ಧ ಅರ್ಜಿ ಸಲ್ಲಿಸಿದ್ದೀರಿ. ಈ ಮೂಲಕ ಸಾರ್ವಜನಿಕರನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದು ಅಸಮಾಧಾನ ಹೊರಹಾಕಿತು.

High Court
ಹೈಕೋರ್ಟ್

By

Published : Oct 26, 2021, 2:28 PM IST

ಬೆಂಗಳೂರು: ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಕೋವಿಡ್ ಲಸಿಕೆ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದೆ.

ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳ ಉದ್ಯೋಗಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿ ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ವಕೀಲ ಸಯ್ಯದ್ ಶುಜಾತ್ ಮೆಹಿ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟಿಸ್ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿದ ಪೀಠ, ಸ್ವತಃ ನೀವೇ ಲಸಿಕೆ ಪಡೆದಿದ್ದೂ ಲಸಿಕೆ ವಿರುದ್ಧ ಅರ್ಜಿ ಸಲ್ಲಿಸಿದ್ದೀರಿ. ಈ ಮೂಲಕ ಸಾರ್ವಜನಿಕರನ್ನು ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ. ಓರ್ವ ವಕೀಲರಾಗಿ ಹೀಗೆ ಮಾಡುವುದು ಸರಿಯಲ್ಲ. ಅರ್ಜಿ ಹಿಂಪಡೆದುಕೊಳ್ಳಿ ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಿ ಅರ್ಜಿ ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ಅರ್ಜಿದಾರರು ವಾದಿಸಿ, ಖುದ್ದು ಲಸಿಕೆ ಪಡೆದಿರುವ ನಾನು ಲಸಿಕೆಯ ಸಾಮರ್ಥ್ಯ ಪ್ರಶ್ನಿಸುತ್ತಿಲ್ಲ. ಅಥವಾ ವ್ಯಾಕ್ಸಿನೇಷನ್ ಪ್ರಶ್ನಿಸುತ್ತಿಲ್ಲ. ಬದಲಿಗೆ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಹೋಟೆಲ್ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯ ಮಾಡಿರುವುದು ಸರಿಯಲ್ಲ. ಲಸಿಕಾ ಅಭಿಯಾನವನ್ನು ಉದ್ಯೋಗದೊಂದಿಗೆ ಜೋಡಿಸುವುದು ಸರಿಯಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದಲೇ ಲಸಿಕೆ ನೀಡಲಾಗುತ್ತಿದೆ. ಒಂದು ವೇಳೆ ನಿಜಕ್ಕೂ ಜನರಿಗೆ ಲಸಿಕೆ ಸಮಸ್ಯೆಯಾಗಿದ್ದರೆ ಅವರು ಕೇಳುತ್ತಾರೆ. ಇದರಲ್ಲಿ ನೀವು ಆಕ್ಷೇಪ ಎತ್ತುವ ಅಗತ್ಯವಿಲ್ಲ. ನಿಮ್ಮ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯೂ ಇಲ್ಲ. ಪ್ರಚಾರದ ಉದ್ದೇಶದಿಂದ ಅರ್ಜಿ ಸಲ್ಲಿಸಿರುವಂತೆ ಕಾಣುತ್ತಿದೆ. ಹೀಗಾಗಿ ಅರ್ಜಿ ಹಿಂಪಡೆಯಲು ಬಯಸಿದರೆ ಅದನ್ನು ಕೋರ್ಟ್ ಮಾನ್ಯ ಮಾಡುತ್ತದೆ. ಇಲ್ಲದಿದ್ದರೆ ದಂಡ ವಿಧಿಸಿ ಅರ್ಜಿ ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಈ ವೇಳೆ ವಕೀಲರು ಅರ್ಜಿ ಹಿಂಪಡೆಯಲು ಒಪ್ಪಿದ್ದರಿಂದ ಅರ್ಜಿ ವಜಾ ಮಾಡಿ ಆದೇಶಿಸಿತು.

ಇದನ್ನೂ ಓದಿ:ವಿಶ್ವವಿಖ್ಯಾತ ಖಜರಾನ ಗಣೇಶ ದೇಗುಲದ ಹುಂಡಿಯಲ್ಲಿ ಸಿಕ್ತು 1 ಕೋಟಿ 80 ಲಕ್ಷ ರೂ

ABOUT THE AUTHOR

...view details