ಬೆಂಗಳೂರು :ಕಳೆದ ಆಗಸ್ಟ್‌ನಲ್ಲಿ ತುಮಕೂರಿನಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಭಾಗವಹಿಸದಂತೆ ವಕೀಲರನ್ನು ತಡೆದಿದ್ದ ಮಂಡ್ಯ ವಕೀಲರ ಸಂಘದ ಸದಸ್ಯರ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಂಡ್ಯ ವಕೀಲರ ಸಂಘದ ಈ ನಿರ್ಧಾರ ಪ್ರಶ್ನಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಸಂಘದ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದೆ.
ಉತ್ತಮ ತಿಳಿವಳಿಕೆ ಮೇಲುಗೈ ಸಾಧಿಸಲಿ: ವಿಚಾರಣೆ ವೇಳೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪರ ವಕೀಲರು, ಮಂಡ್ಯ ವಕೀಲರ ಸಂಘದ ಎಚ್ಚರಿಕೆ ಪಾಲಿಸದ ಇಬ್ಬರು ಪ್ಯಾನಲ್ ವಕೀಲರನ್ನು ಅಮಾನತು ಮಾಡಲಾಗಿದೆ ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಂಡ್ಯ ವಕೀಲರ ಸಂಘದ ನಡೆಯನ್ನು ಹೇಗೆ ಸಮರ್ಥಿಸುತ್ತೀರಿ? ಇದು ಸರಿಯಾದ ವಿಧಾನವೇ? ಉತ್ತಮ ತಿಳಿವಳಿಕೆ ಮೇಲುಗೈ ಸಾಧಿಸಲಿ ನಿಮ್ಮ ನಡೆಯು ನ್ಯಾಯದಾನಕ್ಕೆ ಅಡ್ಡಿಯಾಗಿದೆ. ಉತ್ತಮ ತಿಳಿವಳಿಕೆ ಮೇಲುಗೈ ಸಾಧಿಸಲಿ, ಇಲ್ಲವಾದಲ್ಲಿ ನಾವು ಗಂಭೀರವಾದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿತು.
ಸಾರ್ವಜನಿಕರ ಒಳಿತಿಗಾಗಿ ಲೋಕ ಅದಾಲತ್ ನಡೆಸಲಾಗುತ್ತಿದ್ದು, ಇದರಲ್ಲಿ ಯಾರ ವೈಯಕ್ತಿಕ ಹಿತಾಸಕ್ತಿಯೂ ಅಡಗಿಲ್ಲ. ಲೋಕ ಅದಾಲತ್‌ನಲ್ಲಿ ಕರ್ನಾಟಕ ದೇಶದಲ್ಲಿಯೇ ದಾಖಲೆ ನಿರ್ಮಿಸಿದೆ. ಈ ದಾಖಲೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವಕೀಲರ ಸಂಘದ ಸದಸ್ಯರ ಪ್ರಯತ್ನ ಮಾಡಬೇಕು ಎಂದು ತಿಳಿಸಿ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದೆ.