ಬೆಂಗಳೂರು :ನಗರದ ಹೊರವಲಯದ ಸಾದಹಳ್ಳಿಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ.
ಕಲ್ಲು ಗಣಿಗಾರಿಕೆಯನ್ನು ಪ್ರಶ್ನಿಸಿ ಸಾದಹಳ್ಳಿಯ ಹಾಲಿವುಡ್ ಟೌನ್ ನಿವಾಸಿಗಳಾದ ರಾಮಭದ್ರನ್ ವೀರ ರಾಘವನ್ ಸೇರಿದಂತೆ ಆರು ಜನ ಹಿರಿಯ ನಾಗರಿಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ‘ಹಿರಿಯ ನಾಗರಿಕರಾದ ಅರ್ಜಿದಾರರು ನೆಲೆಸಿರುವ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ಮತ್ತು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅವರ ಜೀವಕ್ಕೆ ಅಪಾಯವಿದೆ ಎಂಬುದಾಗಿ ಅರ್ಜಿಯಲ್ಲಿ ಹೇಳಲಾಗಿದೆ.
ಹಾಗಾಗಿ, ಅರ್ಜಿದಾರರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ಸರ್ಕಾರಕ್ಕೆ ನಿರ್ದೇಶಿಸಿತು. ಜತೆಗೆ, ಸರ್ಕಾರ ಸೇರಿದಂತೆ ಅರ್ಜಿಯಲ್ಲಿನ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಪಿಐಎಲ್ ಸಾರಾಂಶ :ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಮತ್ತು ಚೌಡೇನಹಳ್ಳಿಯಲ್ಲಿ ಹಾಲಿವುಡ್ ಟೌನ್ ಮತ್ತು ಸ್ವಿಸ್ ಟೌನ್ ಎಂಬ ವಸತಿ ಬಡಾವಣೆಗಳಿವೆ. 100 ಮೀಟರ್ ದೂರದಲ್ಲೇ ಸಾದಹಳ್ಳಿ ಕಲ್ಲು ಗಣಿಗಾರಿಕೆ ಘಟಕವಿದೆ. ಈ ಹಿಂದೆ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ಸ್ಥಳೀಯ ನಿವಾಸಿಗಳ ಪ್ರತಿಭಟನೆ ಬಳಿಕ ಸರ್ಕಾರ ನಿರ್ಬಂಧಿಸಿತ್ತು. ಗಣಿ ಪರವಾನಿಗೆಯನ್ನು ನವೀಕರಿಸಿರಲಿಲ್ಲ.
ಇತ್ತೀಚೆಗೆ ಗಣಿಗಾರಿಕೆಗೆ ಸರ್ಕಾರವೇ ಪರವಾನಿಗೆ ನೀಡಿರುವುದು ತಿಳಿದು ಬಂದಿದೆ. ಕಲ್ಲುಗಣಿಗಾರಿಕೆ ತಡೆಯಲು ಸಂಬಂಧಪಟ್ಟವರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಗಣಿಗಾರಿಕೆಯಿಂದ ಉತ್ಪತ್ತಿಯಾಗುತ್ತಿರುವ ಧೂಳು ಸ್ಥಳೀಯರಿಗೆ ಅದರಲ್ಲೂ ಹಿರಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸ್ಥಳೀಯರು ಸಿಲಿಕೋಸಿಸ್, ಅಸ್ತಮಾ, ಅಲರ್ಜಿ ಮತ್ತು ಶ್ವಾಸಕೋಶ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ಹಾಗಾಗಿ, ಸಾದಹಳ್ಳಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ನಿಷೇಧ ಮಾಡಬೇಕು ಹಾಗೂ ಗಣಿ ಪರವಾನಿಗೆಗಳನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ : ರಾಜ್ಯಮಟ್ಟದ 'ಉತ್ತಮ ಶಿಕ್ಷಕರ ಪ್ರಶಸ್ತಿ' ಪಟ್ಟಿ ಪ್ರಕಟ: ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಹೆಸರು ಇಲ್ಲಿದೆ..