ಕರ್ನಾಟಕ

karnataka

ETV Bharat / state

ಮೈಸೂರು ವಿವಿ ಕುಲಪತಿ ಲೋಕನಾಥ್​ ನೇಮಕಾತಿ ರದ್ದುಪಡಿಸಿದ ಹೈಕೋರ್ಟ್

ಮೈಸೂರು ವಿವಿ ಕುಲಪತಿ ಲೋಕನಾಥ್ ಅವರ ನೇಮಕಾತಿಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.

High court on Mysuru University vc
ಮೈಸೂರು ವಿವಿ ಕುಲಪತಿಯಾಗಿ ಲೋಕನಾಥ್​ ನೇಮಕ ರದ್ದು ಪಡಿಸಿದ ಹೈಕೋರ್ಟ್

By ETV Bharat Karnataka Team

Published : Sep 12, 2023, 7:58 PM IST

ಬೆಂಗಳೂರು:ಮೈಸೂರು ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ. ಎನ್ ಕೆ ಲೋಕನಾಥ್ ನೇಮಕ ಮಾಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಮೈಸೂರು ವಿವಿ ಕುಲಪತಿ ಹುದ್ದೆಗೆ ಲೋಕನಾಥ್‌ ಅವರನ್ನು ನೇಮಿಸಿ 2023ರ ಮಾರ್ಚ್ 23ರಂದು ರಾಜ್ಯಪಾಲರು ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಪ್ರೊ. ಶರತ್ ಅನಂತಮೂರ್ತಿ ಮತ್ತು ಡಾ. ಜಿ ವೆಂಕಟೇಶ್‌ ಕುಮಾರ್‌ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರ ಪೀಠ, ಲೋಕನಾಥ್​ ನೇಮಕ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ. ಜೊತೆಗೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ-2000 ಮತ್ತು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ-2018ರ ನಿಯಮಗಳ ಅನುಸಾರ ಮೈಸೂರು ವಿವಿ ಕುಲಪತಿ ಹುದ್ದೆಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ನಿರ್ದೇಶಿಸಿದೆ.

ಲೋಕನಾಥ್‌ ಅವರನ್ನು ಮೈಸೂರು ವಿವಿ ಕುಲಪತಿ ಹುದ್ದೆಗೆ ನೇಮಕ ಮಾಡುವ ವೇಳೆ ನಿಯಮಾವಳಿಗಳನ್ನು ಸೂಕ್ತವಾಗಿ ಪಾಲನೆ ಮಾಡಿಲ್ಲ. ಇದರಿಂದ ಅವರ ನೇಮಕಾತಿಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ರಾಜ್ಯ ಸರ್ಕಾರವು ಮೈಸೂರು ವಿವಿ ಕುಲಪತಿ ನೇಮಕ ಪ್ರಕ್ರಿಯೆಯನ್ನು ಹೊಸದಾಗಿ ಮಾಡಬೇಕು. ಅದಕ್ಕಾಗಿ ಹಿಂದಿನ ಶೋಧನಾ ಸಮಿತಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕುಲಪತಿ ಹುದ್ದೆಗೆ ಅರ್ಹರಾದವರ ಮೂವರು ಹೆಸರು ಸೂಚಿಸಲು ಹೊಸದಾಗಿ ಶೋಧನಾ ಸಮಿತಿಯನ್ನು ರಚನೆ ಮಾಡಬೇಕು. ಲೋಕನಾಥ್‌ ಅವರ ಅರ್ಜಿ ಸೇರಿದಂತೆ ಎಲ್ಲಾ ಅರ್ಹರ ಅರ್ಜಿಗಳನ್ನು ಹೊಸದಾಗಿ ಪರಿಗಣಿಸಬೇಕು. ನಂತರ ಅರ್ಹರ ಹೆಸರನ್ನು ರಾಜ್ಯ ಸರ್ಕಾರಕ್ಕೆ ರವಾನಿಸಬೇಕು ಎಂದು ಆದೇಶದಲ್ಲಿ ಆದೇಶದಲ್ಲಿ ವಿವರಿಸಿದೆ.

ಸಮಿತಿಯು ಶಿಫಾರಸು ಮಾಡಿದ ಮೂರು ಅರ್ಹರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ಬಳಿಕ ರಾಜ್ಯಪಾಲರು ಆ ಮೂವರ ಹೆಸರಲ್ಲಿ ಒಬ್ಬರ ಹೆಸರು ಅಂತಿಮಗೊಳಿಸಿ, ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದ ನಂತರ ಕುಲಪತಿ ಹುದ್ದೆಗೆ ನೇಮಕ ಮಾಡಬೇಕು. ಒಂದೊಮ್ಮೆ ಎರಡನೇ ಪಟ್ಟಿಯಲ್ಲಿ ಅರ್ಹರ ಹೆಸರು ಅಗತ್ಯವಿದೆ ಎಂದು ರಾಜ್ಯಪಾಲರು ಭಾವಿಸಿದಲ್ಲಿ, ಅದನ್ನು ರಾಜ್ಯ ಸರ್ಕಾರದಿಂದ ಕೋರಬಹುದು. ರಾಜ್ಯಪಾಲರು ಎರಡನೇ ಪಟ್ಟಿಯನ್ನು ಕೋರಿದರೆ ಸರ್ಕಾರವು ಶೋಧನಾ ಸಮಿತಿಯಿಂದ ರಾಜ್ಯ ಸರ್ಕಾರ ಅರ್ಹರ ಹೆಸರುಗಳನ್ನು ಪಡೆಯಬಹುದು. ಆ ಹೆಸರುಗಳನ್ನು ಸೂಚಿಸುವ ವೇಳೆ ಸಮಿತಿಯ ಅದೇ ನಿಯಮಗಳನ್ನು ಪಾಲನೆ ಮಾಡಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ?ಶೋಧನಾ ಸಮಿತಿಯು ಪ್ರೊ. ಎನ್ ಕೆ ಲೋಕನಾಥ್, ಪ್ರೊ. ಶರತ್ ಅನಂತಮೂರ್ತಿ, ಪ್ರೊ. ಡಿ ಎಸ್‌ ಗುರು ಅವರ ಹೆಸರುಗಳನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ರಾಜ್ಯಪಾಲರು 2023ರ ಮಾ.23ರಂದು ಪ್ರೊ. ಎನ್ ಕೆ ಲೋಕನಾಥ್ ಅವರನ್ನು ನಾಲ್ಕು ವರ್ಷಗಳ ಅವಧಿಗೆ ಅಥವಾ 67 ವರ್ಷಗಳಾಗುವವರೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆಯ ಅನ್ವಯ ನಿರ್ದಿಷ್ಟ ಅರ್ಹತೆ ಇಲ್ಲದಿದ್ದರೂ ನಿಯಮಾವಳಿ ಉಲ್ಲಂಘಿಸಿ, ಪ್ರೋ.ಲೋಕನಾಥ್ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. ಮೈಸೂರಿನ ಜಯಲಕ್ಷ್ಮೀಪುರಂ ನಿವಾಸಿ ಡಿ ವಿ ಶಶಿಧರ್ ಮತ್ತಿತರರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಲೋಕನಾಥ್ ಮತ್ತಿತರರ ವಿರುದ್ಧ ಆಸ್ತಿ ಒತ್ತುವರಿ ಸಂಬಂಧ 2020ರ ನ.4ರಂದು ವಂಚನೆ ಪ್ರಕರಣ ದಾಖಲಿಸಿದ್ದರು. ಆ ಕುರಿತ ಪ್ರಕರಣ ಮೈಸೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ಆಕ್ಷೇಪಿಸಿದ್ದರು.

ಕುಲಪತಿಯಾಗಿ ನೇಮಕವಾಗುವವರ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣ ಬಾಕಿ ಇರಬಾರದು. ಆದರೆ, ಕುಲಪತಿಯಾಗಿ ನೇಮಕಗೊಂಡಿರುವ ಲೋಕನಾಥ್ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ. ಆದರೆ, ಆ ವಿಷಯವನ್ನು ಅವರು ಮರೆಮಾಚಿದ್ದಾರೆ. ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ಹಾಗೂ ನಿಯಮಗಳನ್ನು ಗಾಳಿಗೆ ತೂರಿ ಲೋಕನಾಥ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ದಾಖಲೆಗಳ ಪ್ರಕಾರ ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಲು 20 ದಿನ ಸಮಯ ನೀಡಿ 2022ರ ನ.8ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅರ್ಜಿ ಸಲ್ಲಿಕೆಗೆ 2022ರ ನ.24 ಕೊನೆಯ ದಿನವಾಗಿತ್ತು. ಅದೇ ದಿನ ಲೋಕನಾಥ್‌ ಅವರು ಹೈಕೋರ್ಟ್‌ನಲ್ಲಿ ತಮ್ಮ ಪ್ರಕರಣದ ವಿರುದ್ಧ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಜೊತೆಗೆ, 2007ರಲ್ಲಿ ನಡೆದ ಪ್ರಾಧ್ಯಾಪಕ ನೇಮಕದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ತನಿಖೆಗೆ ನೇಮಕ ಮಾಡಲಾಗಿದ್ದ ನ್ಯಾಯಮೂರ್ತಿ ರಂಗವಿಠಲಾಚಾರ್ ಆಯೋಗವು ಪ್ರಾಧ್ಯಾಪಕ ನೇಮಕಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮದಂತೆ 10 ವರ್ಷಗಳ ಬೋಧನಾ ಅನುಭವ ಇರಬೇಕು. ಆದರೆ, ಲೋಕನಾಥ್ ಅವರಿಗೆ ಅದು ಇಲ್ಲ. ಹೀಗಾಗಿ, ಅವರು ಯುಜಿಸಿ ನಿಯಮದ ಪ್ರಕಾರ ಪ್ರೊಫೆಸರ್ ಹುದ್ದೆಗೆ ಅರ್ಹರಲ್ಲ ಎಂಬುದಾಗಿ ಹೇಳಿತ್ತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಆರೋಪಿಗಳಿಗೆ ಮುಂದಿನ ವಿಚಾರಣೆವರೆಗೂ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಿದ ಹೈಕೋರ್ಟ್

ABOUT THE AUTHOR

...view details