ಬೆಂಗಳೂರು :ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದು ಸಂಜೆಯಿಂದ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕುರಿತು ಇಂದು ಪ್ರಕಟಣೆ ಹೊರಡಿಸಿರುವ ಬೆಂಗಳೂರು ಹವಾಮಾನ ಕೇಂದ್ರ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಬಿರುಗಾಳಿ, ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಲಿದ್ದು ಜನರು ಮನೆಗಳಿಂದ ಹೊರಹೋಗುವ ಮುನ್ನ ಎಚ್ಚರವಹಿಸುವುದು ಸೂಕ್ತ ಎಂದು ಸಲಹೆ ನೀಡಿದೆ.
30-40 ಕಿ.ಮೀ ವೇಗದಲ್ಲಿ ಗಾಳಿ: ಐದು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮಾರುತಗಳು ರಾಜ್ಯದ ಗಡಿದಾಟಿ ಹೋದ ನಂತರ ಮಳೆಯಾಗುವ ಸಾಧ್ಯತೆ ಇದೆ. ತಗ್ಗು ಹಾಗೂ ನದಿ ತೀರದ ಪ್ರದೇಶಗಳಲ್ಲಿ ವಾಸಿಸುವ ಜನರು, ಈ ಜಿಲ್ಲೆಗಳಿಗೆ ಪ್ರವಾಸ ಹೊರಟಿರುವ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಮಳೆ: ರಾಜಧಾನಿಯ ಕೆಲವು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ನಗರದ ದಕ್ಷಿಣ ಭಾಗದ ಆರ್.ಆರ್.ನಗರ, ಮೈಸೂರು ರಸ್ತೆ, ಕೆಂಗೇರಿ, ವಿದ್ಯಾಪೀಠದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ವಿಜಯನಗರ, ಕೆ.ಆರ್.ಪುರ, ಅತ್ತಿಗುಪ್ಪೆ ಭಾಗದಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ಮಾಹಿತಿ ನೀಡಿದೆ.