ಬೆಂಗಳೂರು :ಕ್ಷಯರೋಗ ನಿರ್ಮೂಲನೆ ಮಾಡುವ ಸಲುವಾಗಿ ಆರೋಗ್ಯ ಇಲಾಖೆ ಜನರಲ್ಲಿ ವಿಶೇಷ ರೀತಿ ಜಾಗೃತಿ ಮೂಡಿಸಲು ಮುಂದಾಗುತ್ತಿದೆ.
ಡಾ.ರಾಬರ್ಟ್ ಕಾಕ್, 1882ರಲ್ಲಿ ಟಿಬಿ ಬ್ಯಾಕ್ಟೀರಿಯಾದ ಆವಿಷ್ಕಾರ ಘೋಷಿಸಿದ ದಿನವನ್ನು ಪ್ರತಿ ವರ್ಷ ಮಾರ್ಚ್-24ರಂದು ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವ ಕ್ಷಯರೋಗ ದಿನವು ರಾಜಕೀಯ ಮತ್ತು ಸಾಮಾಜಿಕ ಬದ್ಧತೆ ಹೆಚ್ಚುಗೊಳಿಸುವ ಒಂದು ಸುಸಂದರ್ಭವಾಗಿದೆ.
ಕ್ಷಯರೋಗವನ್ನು ನಿಭಾಯಿಸುವಲ್ಲಿ ಕರ್ನಾಟಕವು ಸ್ಥಿರಪ್ರಗತಿ ಸಾಧಿಸುತ್ತಿದೆ. ಕಳೆದ 5 ವರ್ಷಗಳಲ್ಲಿ ಟಿಬಿ ರೋಗ ಪತ್ತೆಯು ಶೇ.33ರಷ್ಟು ಹೆಚ್ಚಳ ಮತ್ತು ಟಿಬಿ ಪರೀಕ್ಷೆಯು ಶೇ.55ರಷ್ಟು ಹೆಚ್ಚಾಗಿದೆ.
ಆರೋಗ್ಯ ಇಲಾಖೆಯು ಈ ವರ್ಷ ಮಾರ್ಚ್-24ರಂದು 'ಕ್ಷಯ ಮುಕ್ತ ಕರ್ನಾಟಕ' ರಾಜ್ಯದ ಕಾರ್ಯತಂತ್ರದ ಯೋಜನೆ ಬಿಡುಗಡೆ ಮಾಡುತ್ತಿದೆ. ಈ ಕಾರ್ಯತಂತ್ರದ ಯೋಜನೆಯು ಭಾರತ ಸರ್ಕಾರದ ರಾಷ್ಟ್ರೀಯ ಕಾರ್ಯತಂತ್ರ ಯೋಜನೆಯಂತೆ (ಎನ್‌ಎಸ್‌ಪಿ)ಯೊಂದಿಗೆ 2025ರ ವೇಳೆಗೆ ಭಾರತದಲ್ಲಿ ಟಿಬಿ ಮುಕ್ತಗೊಳಿಸಲು ಪೂರಕ ಕಾರ್ಯತಂತ್ರವಾಗಿದೆ.
ಈ ವರ್ಷದ ವಿಶ್ವ ಕ್ಷಯರೋಗ ದಿನದ ಘೋಷಣೆ "ಕ್ಷಯರೋಗ ನಿರ್ಮೂಲನೆಗೆ ಕಾಲ ಘಟಸುತ್ತಿದೆ ಎಂಬುದಾಗಿದೆ. ಅದರಂತೆ ರಾಜ್ಯದಲ್ಲಿ ಕ್ಷಯ ಮುಕ್ತ ಕರ್ನಾಟಕದೆಡೆಯ ನಮ್ಮ ಬದ್ಧತೆಗಳನ್ನು ಹೆಚ್ಚುಗೊಳಿಸಬೇಕು ಅಂತಾ ಆಯುಕ್ತರು ಮಾಹಿತಿ ನೀಡಿದ್ದಾರೆ.
ವಿಶ್ವ ಕ್ಷಯರೋಗ ದಿನವನ್ನು ಗುರುತಿಸಲು ಮತ್ತು “ಕ್ಷಯ ಮುಕ್ತ ಕರ್ನಾಟಕದ ಕುರಿತು ಟಿಬಿಯ ಹಾನಿಕಾರಕ ಪರಿಣಾಮದ ಬಗ್ಗೆ ಗಮನ ಸೆಳೆಯಲು ಅಂದು ಪ್ರಮುಖ ಸ್ಮಾರಕಗಳ, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆ ಸಾರ್ವಜನಿಕ ಆಸ್ಪತ್ರೆಗಳ ಕಟ್ಟಡಗಳಲ್ಲಿ ಕೆಂಪು ದೀಪ ಬೆಳಗಿಸಲು ನಿರ್ಧರಿಸಲಾಗಿದೆ.