ಬೆಂಗಳೂರು: ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿದ್ದ ಬಿಜೆಪಿ ಸರ್ಕಾರ, ರೈತರ ಬಗ್ಗೆ ಮೃದುವಾಗಿ ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಇದೀಗ ರಸಗೊಬ್ಬರ ದರವನ್ನು ಶೇ. 60ರಷ್ಟು ಹೆಚ್ಚಳ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರದ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡರು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಬಾರದು. ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ರಸಗೊಬ್ಬರಕ್ಕಾಗಿ ನೀಡುತ್ತಿದ್ದ 1.5 ಲಕ್ಷ ಕೋಟಿಯಷ್ಟು ಸಬ್ಸಿಡಿ ಮುಂದುವರೆಸುವಂತೆ ಮನವರಿಕೆ ಮಾಡಿಕೊಡಬೇಕು. ಈಗ ಅದನ್ನು ಶೇ. 50ರಷ್ಟು ಕಡಿತ ಮಾಡಲಾಗಿದೆ ಎಂದಿದ್ದಾರೆ.