ಬೆಂಗಳೂರು: ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ನಂತರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ವಾರ್ ಮೂಲಕ ರಾಜ್ಯದಲ್ಲಿ ಸುದ್ದಿಯಾಗುತ್ತಿದ್ದಾರೆ.
ಇದೀಗ ಎರಡು ಉಪಚುನಾವಣೆ ಹಾಗೂ ವಿಧಾನಪರಿಷತ್ನ ನಾಲ್ಕು ಕ್ಷೇತ್ರಗಳ ಚುನಾವಣೆ ಬಂದಿದ್ದು, ಸಮುದಾಯದ ಮತಗಳ ಓಲೈಕೆಗಾಗಿ ಆರೋಪ, ಪ್ರತ್ಯಾರೋಪದಲ್ಲಿ ಇಬ್ಬರು ನಾಯಕರು ತೊಡಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜೆಡಿಎಸ್ನಲ್ಲಿದ್ದಾಗ ಮುಖ್ಯಮಂತ್ರಿಯಾಗಲು ಬಿಡಲಿಲ್ಲವೆಂಬುದೇ ಸಿದ್ದರಾಮಯ್ಯ ಅವರಿಗೆ ಇರುವ ಸಿಟ್ಟು. ಹಾಗಾಗಿ, ಅಂದು ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದರು. ಅಂದಿನಿಂದ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಲು ಶುರುವಿಟ್ಟುಕೊಂಡರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಜೆಡಿಎಸ್ನಲ್ಲಿದ್ದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ, ಹಣಕಾಸು ಸಚಿವರಾಗಿ ಅಧಿಕಾರ ನಡೆಸಿ ನಂತರ ಪಕ್ಷ ತೊರೆದು ತಮ್ಮ ವಿರುದ್ಧ ಮಾತನಾಡಿದ್ದನ್ನು ಸಹಿಸದ ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ಆಗಾಗ ತಿರುಗೇಟು ನೀಡುತ್ತಿದ್ದರು. ಇದು ಆಗಿನಿಂದಲೇ ಮುಂದುವರೆದಿತ್ತು.
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡಾಗಲಂತೂ ಸಿದ್ದರಾಮಯ್ಯ ಅವರ ಕೈಕಟ್ಟಿತ್ತು. ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅವರಿಗೆ ಇಷ್ಟ ಇರಲಿಲ್ಲ. ಆದರೆ, ಹೈಕಮಾಂಡ್ ಮಾತಿಗೆ ಸಿದ್ದರಾಮಯ್ಯ ಮಣಿಯಬೇಕಾಯಿತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಇದನ್ನು ಸಿದ್ದರಾಮಯ್ಯ ಅವರು ಸಹಿಸಲಿಲ್ಲ. ಆದರೂ ಏನೂ ಮಾಡಲಾಗದ ಸ್ಥಿತಿ ಇತ್ತು.
ಕಾಂಗ್ರೆಸ್ನಿಂದಲೇ ಕೇವಲ ಹದಿನಾಲ್ಕು ತಿಂಗಳಲ್ಲಿ ಮೈತ್ರಿ ಸರ್ಕಾರ ಪತನವಾಯಿತು. ಆಗ ಕುಮಾರಸ್ವಾಮಿ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇನ್ನು ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದರೇ ರಾಜ್ಯದಲ್ಲಿ ಏಳರಿಂದ ಹತ್ತು ಸೀಟು ಗೆಲ್ಲಬಹುದಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೆಲುಕು ಹಾಕಿದ್ದರು. ಹೀಗಾಗಿಯೇ ನಾನು ಸಿದ್ಧೌಷಧದ ಬಗ್ಗೆ ನೆನಪಿಸಿಕೊಳ್ಳಬೇಕಾಯಿತು ಎಂದು ಟ್ವೀಟ್ ಮೂಲಕ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕುಟುಕಿದ್ದರು.
ಅವರ ಕನಸು - ಕನವರಿಕೆಗಳನ್ನು ಮೈತ್ರಿ ಸರ್ಕಾರ ಹೋದ ನಂತರವೂ ಜಪಿಸುತ್ತಿರುವುದರಿಂದಲೇ ಹಳೆಯದನ್ನು ನೆನಪಿಸಿಕೊಳ್ಳಬೇಕಾಯಿತು. ನಮ್ಮ ಅವರ ದೋಸ್ತಿ ಕಳಚಿದ ನಂತರ ಈ ಬಗ್ಗೆ ನಾನು ಮಾತನಾಡಿರಲಿಲ್ಲ. ಕಾಂಗ್ರೆಸ್ ನಾಯಕರೇ ಪದೇ ಪದೆ ಮೈತ್ರಿ ಮುಗಿದ ಅಧ್ಯಾಯ ಎಂದು ಈಗ ತುಟಿ ಬಿಚ್ಚುತ್ತಿರುವುದರಿಂದ ನಾನು ಮೌನ ಮುರಿಯಬೇಕಾಯಿತು ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮೈತ್ರಿ ಸರ್ಕಾರ ಪತನವಾಗಿ ಒಂದು ವರ್ಷ ತುಂಬುತ್ತಿದ್ದಂತೆಯೇ ಮತ್ತೆ ಆ ನಾಯಕರು ಟ್ವೀಟ್ ವಾರ್ ಮೂಲಕ ಸುದ್ದಿಯಾಗಿದ್ದರು. ಇದೀಗ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಮತ್ತೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಟ್ವೀಟ್ ವಾರ್ನಲ್ಲಿ ತೊಡಗಿದ್ದಾರೆ. ಅಂದು ಸಿದ್ದರಾಮಯ್ಯ ಅವರಿಗೆ ಸಿಎಂ ಪದವಿ ಸಿಗಲಿಲ್ಲ. ಇಂದು ಕುಮಾರಸ್ವಾಮಿ ಅವರಿಗೆ ಸಿಎಂ ಪದವಿ ಸಿಕ್ಕಿದ್ದು ಅಲ್ಪಾವಧಿ. ಹಾಗಾಗಿ, ಅಧಿಕಾರ ಕೈತಪ್ಪಿದ ಕಾರಣಕ್ಕಾಗಿ ಇಬ್ಬರು ನಾಯಕರು ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.