ಕರ್ನಾಟಕ

karnataka

ETV Bharat / state

ನನಗೆ ಅಧಿಕಾರದ ಆಸೆ ಇಲ್ಲ, ಪಕ್ಷ ಅಧಿಕಾರಕ್ಕೆ ತರುವುದೇ ನನ್ನ ಗುರಿ: HDK ಘೋಷಣೆ - HDK reaction

ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್​ ಜಿಲ್ಲಾ ನಾಯಕರ ಸಭೆಗೂ ಮುನ್ನ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ, 2023 ರ ವಿಧಾನಸಭೆ ಚುನಾವಣೆಗೆ ಕನಿಷ್ಠ 150 ಜನ ಅಭ್ಯರ್ಥಿಗಳನ್ನು ಮುಂದಿನ ಜನವರಿ 15ರ ಒಳಗೆ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

HDK reaction
ಕುಮಾರಸ್ವಾಮಿ ಪ್ರತಿಕ್ರಿಯೆ

By

Published : Jul 15, 2021, 1:52 PM IST

Updated : Jul 15, 2021, 2:53 PM IST

ಬೆಂಗಳೂರು: ನನಗೆ ಅಧಿಕಾರದ ಆಸೆ ಇಲ್ಲ. ಆದರೆ, ಸ್ವತಂತ್ರವಾಗಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾವಾರು ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ಜನರಿಗಾಗಿಯೇ ಇರುವ ಪಕ್ಷ. 2023 ರ ವಿಧಾನಸಭೆ ಚುನಾವಣೆಗೆ ಕನಿಷ್ಠ 150 ಜನ ಅಭ್ಯರ್ಥಿಗಳನ್ನು ಜನವರಿ 15ರ ಒಳಗೆ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಪರಿಸ್ಥಿತಿ, ಬಿಜೆಪಿ ಅಧಿಕಾರ ಎಲ್ಲವನ್ನೂ ಜನತೆ ನೋಡಿದ್ದಾರೆ. ಈ ಹಿಂದೆ ಜನತಾದಳ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಆಗಿರುವುದು. ನಾನು ಕೃಷಿಯಲ್ಲಿ ತೊಡಗಿಕೊಂಡಿದ್ದರೂ, ಪಕ್ಷ ಸಂಘಟನೆಯನ್ನು ಮಾಡುತ್ತಿದ್ದೇನೆ. ಹೊಸದೊಂದು ಬದಲಾವಣೆಗೆ ಪ್ರಾದೇಶಿಕ ಪಕ್ಷದ ಪಾತ್ರದ ಬಗ್ಗೆ ಜನರಿಗೆ ತಿಳಿಸುತ್ತೇನೆ ಎಂದರು.

ಪಕ್ಷ ಅಧಿಕಾರಕ್ಕೆ ತರುವುದೇ ನನ್ನ ಗುರಿ ಕುಮಾರಸ್ವಾಮಿ

ಎಲ್ಲಾ ಪಕ್ಷದವರು ಅಧಿಕಾರಕ್ಕೆ ಬರುವುದಾಗಿ ಹೇಳ್ತಿದ್ದಾರೆ :ಎಲ್ಲ ಪಕ್ಷದವರು ತಾವು ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಮೊದಲುಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ರು. ಬಳಿಕ ಸಿದ್ದರಾಮಯ್ಯ ಇದು ನನ್ನ ಕೊನೆ ಚುನಾವಣೆ ಅಂದ್ರು. ಈಗ ಅವರು ಸಿಎಂ ಸ್ಥಾನದ ಕನಸು ಕಾಣ್ತಿದ್ದಾರೆ. ಕಾಂಗ್ರೆಸ್​ನ ನಾಯಕರು ನಾನೇ ಸಿಎಂ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಎಲ್ಲವನ್ನು ಜನತೆಯ ತೀರ್ಮಾನಕ್ಕೆ ಬಿಡುತ್ತೇನೆ ಎಂದು ರಾಷ್ಟ್ರೀಯ ಪಕ್ಷಗಳ ನಾಯಕರ ವಿರುದ್ಧ ಹೆಚ್​ಡಿಕೆ ವಾಗ್ದಾಳಿ ನಡೆಸಿದರು.

ಉಸ್ತುವಾರಿಗಳಿಂದ ರಾಜ್ಯದ ಸಂಪತ್ತು ಲೂಟಿ : ರಾಷ್ಟ್ರೀಯ ಪಕ್ಷಗಳಿಗೆ ದೆಹಲಿಯಿಂದ ಉಸ್ತುವಾರಿಗಳನ್ನು ಕಳುಹಿಸುತ್ತಾರೆ. ಬಿಜೆಪಿ, ಕಾಂಗ್ರೆಸ್‌‌ನಿಂದ ಉಸ್ತುವಾರಿ ಬರುತ್ತಾರೆ. ಕರ್ನಾಟಕ ರಾಜ್ಯ ಸಂಪದ್ಭರಿತ ರಾಜ್ಯ, ಇಲ್ಲಿರುವ ಸಂಪತ್ತನ್ನು ಲೂಟಿ ಮಾಡಲು ಅವರು ಬರುತ್ತಾರೆ. ಪಾಳೆಗಾರಿಕೆ ನಡೆಸುವ ಕಥೆ ಇದು. ಇಲ್ಲಿರುವ ಸಂಪತ್ತನ್ನು ಚುನಾವಣೆ ನಡೆಸುವ ಸ್ಥಳಗಳಿಗೆ ಕಳಿಸುವುದು ಇದರ ಉದ್ದೇಶ ಎಂದು ಆರೋಪಿಸಿದರು.

ಜಲ ಮಿಷನ್ ಯೋಜನೆ ಬಗ್ಗೆ ತಿಳಿಸಲು ಕೇಂದ್ರ ಸಚಿವರು ಇಲ್ಲಿಗೆ ಬಂದಿದ್ದರು. ಇಲ್ಲಿ ನಡೆಯುವ ಸಭೆಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೋಗುವುದೇ ಇಲ್ಲ. 99 ಲಕ್ಷ ಕುಟುಂಬಗಳಿಗೆ ನೀರು ಪೂರೈಸುವ ಬಗ್ಗೆ ಹೇಳಿದ್ದಾರೆ. ನಿಜವಾಗಿ ಅವರು ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ಬಂದಿಲ್ಲ. ಮಹದಾಯಿ, ಮೇಕೇದಾಟು ವಿಚಾರ ಸಮಗ್ರವಾಗಿ ಚರ್ಚೆ ನಡೆಸಿಲ್ಲ. ಬಂದು ಟೋಪಿ ಹಾಕಿ ಹೋಗಿದ್ದಾರೆ ಎಂದು ಟೀಕಿಸಿದರು.

ಓದಿ : ಸಿದ್ದರಾಮಯ್ಯ ಈ ನಾಡು ಕಂಡ ಮಹಾನ್ ಮೋಸಗಾರ ಮತ್ತು ವಂಚಕ: ಕಟೀಲು

2018ರಲ್ಲಿ ನಾನು ಸಿಎಂ ಆಗಿದ್ದಾಗ ಯಾವ ಯೋಜನೆಗೆ ಚಾಲನೆ ನೀಡಿದ್ದೆನೋ, ಅದನ್ನೇ ಈಗ ಮುಂದುವರೆಸುತ್ತಿದ್ದಾರೆ. ಭೂ ಸ್ವಾಧೀನ ಕ್ಲಿಯರೆನ್ಸ್ ಮಾಡಲು ಅನುಮತಿ ನೀಡಲಾಗಿತ್ತು. ಔಟರ್ ರಿಂಗ್ ರೋಡ್ ಪರಿಸ್ಥಿತಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಯಾವ ಸಂದರ್ಭದಲ್ಲಿ ಜನರ ಹತ್ತಿರ ಹೋಗಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಪಕ್ಷ ಸಂಘಟನೆಗೆ ಸಭೆ : ಜನತೆ ಮುಂದೆ ಹೋಗಲು ಹಲವಾರು ರೀತಿಯ ಕಾರ್ಯಕ್ರಮಗಳ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ಪಕ್ಷದ ಕಚೇರಿಯಲ್ಲಿ ಜಿಲ್ಲಾವಾರು ಸಭೆ ಕರೆಯಲಾಗಿದೆ. ಕೋವಿಡ್ ಹರಡುವಿಕೆ ಕೊನೆಗೊಂಡಿಲ್ಲ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಜಿಲ್ಲೆಗಳಿಗೆ ಹೋಗುವುದು ಸೂಕ್ತವಲ್ಲ. ಮುಂದಿನ ಬುಧವಾರದವರೆಗೂ ಸಭೆ ಕರೆದು ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಪ್ರವಾಸ : ಕೋವಿಡ್ ಸೋಂಕು ಕಡಿಮೆಯಾದ ಬಳಿಕ ಜಿಲ್ಲಾ ಪ್ರವಾಸ ಮಾಡುತ್ತೇನೆ. ಆಷಾಢ ಮಾಸದ ನಂತರ ಜಿಲ್ಲಾ ಪ್ರವಾಸ ಹಮ್ಮಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಬಗ್ಗೆ ತಿಳಿಸಲಾಗುವುದು. ರಾಜ್ಯದಲ್ಲಿ ಉಂಟಾದ ಕೋವಿಡ್ ಸಮಸ್ಯೆ, ಶಿಕ್ಷಣ, ಕೃಷಿ, ಯುವಕರಿಗೆ ಉದ್ಯೋಗ ಸೃಷ್ಟಿ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ. ತಾಲೂಕು, ಜಿಲ್ಲಾ ಪಂಚಾಯತ್, ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ. ಇದನ್ನೇ ಜನರ ಬಳಿ ಕೊಂಡೊಯ್ಯುತ್ತೇನೆ ಎಂದು ಹೇಳಿದರು.

ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಲು ನಕಾರ : ಕೆಆರ್‌ಎಸ್ ಡ್ಯಾಂ ಬಿರುಕು ಸಂಬಂಧ ಸುಮಲತಾ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಹೆಚ್​ಡಿಕೆ, ಅಯ್ಯೋ.. ಅದೆಲ್ಲಾ ಬೇಡ ಬಿಡಿ, ಆ ಟೆಕ್ನಿಕಲ್ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿ ಕಚೇರಿ ಒಳಗೆ ತೆರಳಿದರು.

Last Updated : Jul 15, 2021, 2:53 PM IST

ABOUT THE AUTHOR

...view details