ಬೆಂಗಳೂರು:ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ ನಿಂದ ಆದ ನೋವು, ಕಿರುಕುಳವನ್ನು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಮೆಲುಕು ಹಾಕುತ್ತಿದ್ದಾರೆ. ಕಾಂಗ್ರೆಸ್ ಜೊತೆ ಹೋಗಿದ್ದು ಮೋಸ ಎಂದು ಈಗ ಅವರ ಅರಿವಿಗೆ ಬಂದಿದೆ ಎಂದು ಡಿಸಿಎಂ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಮೈತ್ರಿ ನೋವನ್ನು ಹೆಚ್ಡಿಕೆ ಮೆಲುಕು ಹಾಕುತ್ತಿದ್ದಾರೆ: ಡಿಸಿಎಂ ಅಶ್ವತ್ಥನಾರಾಯಣ..! ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ವೇಳೆ ಆಡಳಿತ ಮಾಡಲು ಮುಕ್ತ ಅವಕಾಶ ಇಲ್ಲ. ಒತ್ತಡವಾಗುತ್ತಿದೆ ಎಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರತಿನಿತ್ಯ ಹೇಳಿಕೆ ಕೊಡುತ್ತಿದ್ದರು. ಮೈತ್ರಿ ಸರ್ಕಾರದಲ್ಲಿನ ಇಂತಹ ವಾತಾವರಣದಿಂದ ಬೇಸತ್ತು ಸಮ್ಮಿಶ್ರ ಸರ್ಕಾರದ ಆಡಳಿತ ಬೇಡ ಎಂದು ಶಾಸಕರು ರಾಜೀನಾಮೆ ಕೊಟ್ಟು ಬಂದರು ಎಂದು ಶಾಸಕರ ರಾಜೀನಾಮೆ ಪ್ರಹಸನವನ್ನು ಸಮರ್ಥಿಸಿಕೊಂಡರು.
ಓದಿ:'ಕೈ' ನಂಬಿ ಕೆಟ್ಟೆ ಎಂದ ಹೆಚ್ಡಿಕೆ: ಸಿದ್ದರಾಯ್ಯ, ಸಿ.ಟಿ.ರವಿ ಟಾಂಗ್
ಅಂದು ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಹೋಗದೆ ಬಿಜೆಪಿ ಜೊತೆ ಬಂದಿದ್ದರೆ ಮೈತ್ರಿ ಸರ್ಕಾರ ಇರುತ್ತಿತ್ತು ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿರಲಿಲ್ಲ, ರೈತ ನಾಯಕ ಯಡಿಯೂರಪ್ಪ ಇರುವಾಗ ನಾವೇಕೆ ಮುಖ್ಯಮಂತ್ರಿ ಸ್ಥಾನವನ್ನು ಅವರಿಗೆ ಬಿಟ್ಟುಕೊಡುತ್ತಿದ್ದೆವು. ನಮ್ಮ ಪಕ್ಷದಿಂದಲೇ ಮುಖ್ಯಮಂತ್ರಿ ಆಗುತ್ತಿದ್ದರು ನಾವು ಇನ್ನೊಂದು ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವ ಪ್ರಶ್ನೆಯೇ ಬರುತ್ತಿರಲಿಲ್ಲ ಎಂದರು.
ಜೆಡಿಎಸ್ ಗೆ ಬರುತ್ತಿದ್ದದ್ದು ಕಾಂಗ್ರೆಸ್ ವಿರೋಧಿ ಮತಗಳೇ. ಹೆಚ್ಡಿಕೆ ಕಾಂಗ್ರೆಸ್ನಿಂದ ಅನುಭವಿಸಿರುವ ನೋವು, ಕಿರುಕುಳವನ್ನು ಕುಮಾರಸ್ವಾಮಿ ಮೆಲುಕು ಹಾಕುತ್ತಿದ್ದಾರೆ ಅಷ್ಟೇ. ಪ್ರಸ್ತುತ ಅವರಿಗಿರುವುದು ಬಿಜೆಪಿ ಪರವಾಗಿ ಸಾಫ್ಟ್ ಕಾರ್ನರ್ ಅಲ್ಲ ಅದು ಕಾಂಗ್ರೆಸ್ ಜೊತೆ ಹೋಗಿದ್ದು ಬಹಳ ಮೋಸ ಎನ್ನುವ ಅರಿವಾಗಿದೆ ಅದನ್ನು ಇಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ತಿಳಿಸಿದರು.